ಸಾವಿನಲ್ಲೂ ಸಾರ್ಥಕತೆ ಮೆರೆದ ಯಶ್‌ರಾಜ್‌ ಝೀರೋ ಟ್ರಾಫಿಕ್‌ನಲ್ಲಿ ಅಂಗಾಂಗ ರವಾನೆ, ಜೋಡಣೆ

mng--14 Sep Indaian Hospital
Published on

ಮಂಗಳೂರು: ತಲೆಗೆ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಪಿಯುಸಿ ವಿದ್ಯಾರ್ಥಿ ಯಶ್‌ರಾಜ್‌ನ ಅಂಗಾಂಗಗಳನ್ನು ಬುಧವಾರ ಇಂಡಿಯಾನ ಆಸ್ಪತ್ರೆಯಿಂದ ಬೆಂಗಳೂರು ಮತ್ತು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ನಲ್ಲಿ ರವಾನಿಸಲಾಯಿತು.


ಉಳ್ಳಾಲದ ತ್ಯಾಗರಾಜ್ ಮಮತಾ ಕರ್ಕೇರ ಅವರ ಪುತ್ರ, 16 ವರ್ಷದ ಯಶರಾಜ್ ವಾರದ ಹಿಂದೆ ಖಾಸಗಿ ಸಿಟಿ ಬಸ್ಸಿನಲ್ಲಿ ಕಾಲೇಜಿಗೆ ಬರುತ್ತಿದ್ದಾಗ ಜಪ್ಪಿನಮೊಗರು ನೇತ್ರಾವತಿ ಸೇತುವೆಯ ಬಳಿ ಹೆದ್ದಾರಿಯಲ್ಲಿ ಬಸ್ಸಿನಿಂದ ಎಸೆಯಲ್ಪಟ್ಟಿದ್ದ. ಪರಿಣಾಮ ತಲೆಯ ಭಾಗಕ್ಕೆ ತೀವ್ರ ಗಾಯಗೊಂಡು ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಚಿಂತಾಜನಕ ಸ್ಥಿತಿಯಲ್ಲಿದ್ದ ಯಶರಾಜ್ನನ್ನು ಬದುಕಿಸಲು ವೈದ್ಯರು ಪ್ರಯತ್ನ ಮಾಡಿದ್ದಾರೆ. ಮಂಗಳವಾರ ಸಂಜೆ ಮೆದುಳು ನಿಷ್ಕ್ರೀಯವಾಗಿರುವುದಾಗಿ ವೈದ್ಯರು ತಿಳಿಸಿದ್ದರು. ಅಂಗಾಂಗ ದಾನ ಮಾಡುವ ಬಗ್ಗೆ ಕುಟುಂಬಸ್ಥರಿಗೆ ಸಲಹೆ ಮಾಡಿದ್ದಾರೆ. ಮಗನನ್ನು ಕಳಕೊಂಡ ದುಃಖದ ನಡುವೆಯೂ ಹೆತ್ತವರು ಅಂಗಾಂಗ ದಾನಕ್ಕೆ ಒಪ್ಪಿದ್ದು, ಅದರಂತೆ ರಾಜ್ಯ ಸರ್ಕಾರದ ಜೀವ ಸಾರ್ಥಕತೆ ತಂಡದವರು ಅಂಗಾಂಗ ಕಸಿಗೆ ಏರ್ಪಾಡು ಮಾಡಿದ್ದಾರೆ.


ಬೇಡಿಕೆ ಆಧರಿಸಿ ಲಿವರನ್ನು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಕೆಎಂಸಿ ಆಸ್ಪತ್ರೆಗೆ ಒಯ್ಯಲು ವ್ಯವಸ್ಥೆ ಮಾಡಿದ್ದರೆ, ಒಂದು ಕಿಡ್ನಿ ಮತ್ತು ಎರಡು ಕಣ್ಣುಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಒಯ್ಯಲಾಗಿದೆ. ಬೆಂಗಳೂರಿಗೆ ಒಯ್ಯಲು ನಗರದಿಂದ ಬಜ್ಜೆ ವಿಮಾನ ನಿಲ್ದಾಣಕ್ಕೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ವಿಮಾನದ ಮೂಲಕ ಒಯ್ದು ಲಿವರ್ ಕಸಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಗೂ ಒಂದು ಕಿಡ್ನಿ ಮತ್ತು ಎರಡು ಕಣ್ಣುಗಳನ್ನು ಝೀರೋ ಟ್ರಾಫಿಕಲ್ಲಿ ಒಯ್ಯಲಾಗಿದೆ. ಮತ್ತೊಂದು ಕಿಡ್ನಿಯನ್ನು ಇಂಡಿಯಾನ ಆಸ್ಪತ್ರೆಯಲ್ಲಿಯೇ ಬೇರೊಬ್ಬ ವ್ಯಕ್ತಿಗೆ ಕಸಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net