ಆ.15ರ ಸ್ವಾತಂತ್ರ್ಯೋತ್ಸವದಂದು ಅಂಗಾಂಗ ದಾನಿಗಳಿಗೆ ಸನ್ಮಾನ

meeting
Published on

ಬೆಂಗಳೂರು: ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆ.15ರಂದು ನಡೆಯಲಿರುವ ರಾಜ್ಯಮಟ್ಟದ ಸ್ವಾತಂತ್ರ್ಯೋತ್ಸವದಂದು 80 ಮಂದಿಗೆ ಅಂಗಾಂಗ ದಾನಿಗಳಿಗೆ ಮುಖ್ಯಮಂತ್ರಿ ಅವರು ಸನ್ಮಾನಿಸಲಿದ್ದು, ಪ್ರಶಂಸಾ ಪತ್ರವನ್ನು ವಿತರಿಸಲಿದ್ದಾರೆ.

ಈ ಸಂಬಂಧ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪಾಲ್ಗೊಂಡ ಬಳಿಕ ಸುದ್ದಿಗಾರರಿಗೆ ವಿಷಯ ತಿಳಿಸಿದರು.

ಅಂಗಾಂಗ ದಾನವನ್ನು ಪ್ರಚುರಪಡಿಸಲು ಸರ್ಕಾರ ಹೆಚ್ಚಿನ ಆಸ್ಥೆ ವಹಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅಂಗಾಂಗ ದಾನ ಮಾಡಿರುವ ಬೆಂಗಳೂರು ನಗರ ಜಿಲ್ಲೆಯ 80 ಮಂದಿಯನ್ನು ಅಂದು ಗೌರವಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿ ವರ್ಗಕ್ಕೆ ಸೂಚಿಸಲಾಗಿದೆ ಎಂದರು.

ಪ್ರತೀವರ್ಷದಂತೆ ಈ ವರ್ಷವೂ ಸ್ವಾತಂತ್ರ್ಯೋತ್ಸವ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ಇದಕ್ಕಾಗಿ ಪೂರ್ವಾಭ್ಯಾಸ ಮಾಡಿಕೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ತಿಂಡಿ, ಕುಡಿಯುವ ನೀರು ಹಾಗೂ ಕಾರ್ಯಕ್ರಮ ಸ್ಥಳಕ್ಕೆ ಬಂದು ಹೋಗಲು ಸಾರಿಗೆ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಬಂದೋಬಸ್ತ್‌ಗೆ ಒತ್ತು:

ಸಮಾರಂಭ ನಡೆಯಲಿರುವ ಮಾಣಿಕ್ ಷಾ ಆವರಣದಲ್ಲಿ ಸೂಕ್ತ ಬಂದೋಬಸ್ತ್‌ಗಾಗಿ ಅವಶ್ಯಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಬ್ಯಾರಿಕೇಡಿಂಗ್ ವ್ಯವಸ್ಥೆ ಸರಿಪಡಿಸುವುದು, ಹಾಗೂ ಆವರಣ/ಆವರಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಪೂರ್ಣ ಸ್ವಚ್ಚತೆ ಕಾಪಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ವಿವರಿಸಿದರು.

ಸಭೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ಸ್ನೇಹಲ್, ವಿನೋತ್ ಪ್ರಿಯಾ, ರಮ್ಯಾ, ಬೆಂಗಳೂರು ನಗರ ಡಿಸಿ ದಯಾನಂದ್, ಉಪ ಆಯುಕ್ತ ಮಂಜುನಾಥಸ್ವಾಮಿ, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ, ಜಲಮಂಡಳಿ, ಕನ್ನಡ-ಸಂಸ್ಕೃತಿ ಇಲಾಖೆ ಸೇರಿ ಇನ್ನಿತರ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net