ಮಳವಳ್ಳಿ: ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಟ್ರಿಯಗೊಂಡಿದ್ದ ವ್ಯಕ್ತಿಯ ಅಂಗಾಂಗ ದಾನ ಮಾಡುವ ಮೂಲಕ ಕುಟುಂಬದವರು ಮಾನವೀಯತೆ ಮೆರೆದಿದ್ದಾರೆ.
ಮಾ.2ರಂದು ತಾಲೂಕಿನ ಹಾಡ್ಲಿ ಸಮೀಪ ಕಲ್ಯಾಣ ಮಂಟಪದ ಬಳಿ ತಾಲೂಕಿನ ಸಾಹಳ್ಳಿ ಗ್ರಾಮದ ಸಿದ್ದರಾಜು (39)ನಡೆದುಕೊಂಡು ಹೋಗುವಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ಸಿದ್ದರಾಜು ಅವರ ಮಿದುಳು ಡೆಡ್ ಆಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವೆಂದು ತಿಳಿಸಿದ್ದರು. ಕೂಡಲೇ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಆಕ್ಸಿಜನ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಸಿದ್ದರಾಜು ತಾಯಿ ಕೆಂಚಮ್ಮ ಅವರ ಒಪ್ಪಿಗೆ ಪಡೆದು ಕುಟುಂಬದವರು ಅಂಗಾಂಗಗಳ ದಾನಕ್ಕೆ ಒಪ್ಪಿಗೆ ನೀಡಿದ್ದರ ಹಿನ್ನೆಲೆಯಲ್ಲಿ ಸೋಮವಾರ ಮೈಸೂರಿನ ಅಪೋಲೋ ಆಸ್ಪತ್ರೆಗೆ ಸಿದ್ದರಾಜು ದೇಹವನ್ನು ರವಾನಿಸಲಾಯಿತು. ಅಪಘಾತಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.