

ಮಂಗಳೂರು: ನಾಗುರಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಕುಡ್ಲ, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೇನೆಪೋಯ ಸಮುದಾಯ ದಂತ ಆರೋಗ್ಯ ಕೇಂದ್ರ, ಪ್ರಸಾದ್ ನೇತ್ರಾಲಯ ಹಾಗೂ ಸೆಂಚುರಿ ಗ್ರೂಪ್ ಬೆಂಗಳೂರು ಸಹಕಾರದಲ್ಲಿ ಉಚಿತ ಆರೋಗ್ಯ ಶಿಬಿರ ಮರೋಳಿಯ ಗಾರ್ಡಿಯನ್ ಏಂಜಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಲಯನ್ಸ್ ಜಿಲ್ಲೆ 317ಡಿ ಯ ಪ್ರಥಮ ಉಪರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂತಹ ಆರೋಗ್ಯ ಶಿಬಿರದಲ್ಲಿ ಅಂಗಾಂಗ ದಾನಗಳ ಬಗ್ಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು. ಡಾ.ರೇಖ ಅವರು ಆರೋಗ್ಯ ಶಿಬಿರದ ಮಹತ್ವ, ಮಹಿಳಾ ಆರೋಗ್ಯ, ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. ಡಾ.ವಿಷ್ಣು ಕಣ್ಣಿನ ಆರೋಗ್ಯ ಸಂರಕ್ಷಣೆ ಮತ್ತು ಕಣ್ಣಿನ ದಾನ ಮಾಡುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು.
ಬ್ಯಾಂಕಿನ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪ್ರಸ್ತಾವನೆಗೈದರು. ಲಯನ್ಸ್ ಪ್ರಾಂತೀಯ ಅಧ್ಯಕ್ಷ ಚಂದ್ರಹಾಸ ರೈ, ಕುಡ್ಲ ಕ್ಲಬ್‌ನ ಅಧ್ಯಕ್ಷ ಸುರೇಶ ಎಂ.ಎಸ್, ಕಾರ್ಯದರ್ಶಿ ಪ್ರಮೋದ್ ರೈ, ಬ್ಯಾಂಕಿನ ನಿರ್ದೇಶಕರಾದ ರಾಘವ ಅಡ್ಯಾರ್ , ರಾಮಚಂದ್ರ ಉಪಸ್ಥಿತರಿದ್ದರು
ಕಣ್ಣಿನ ತಪಾಸಣೆ, ದಂತ ಚಿಕಿತ್ಸೆ, ಚರ್ಮ ರೋಗ ತಪಾಸಣೆ, ಮಧುಮೇಹ, ರಕ್ತದೊತ್ತಡ ಮತ್ತು ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಸಲಹೆ ನೀಡಲಾಯಿತು. ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಸ್ಥಳೀಯರು ಪ್ರಯೋಜನ ಪಡೆದರು. ಆರೋಗ್ಯ ಮಾಹಿತಿ ಕರಪತ್ರ ವಿತರಿಸಲಾಯಿತು
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಗದೀಶ್ ನಿರೂಪಿಸಿ, ಬ್ಯಾಂಕಿನ ನಿರ್ದೇಶಕ ಶ್ರೀಧರ್ ರಾಜ್ ಶೆಟ್ಟಿ ವಂದಿಸಿದರು.