ಅಂಗಾಂಗಳಿಗೆ ಹೆಚ್ಚಿದ ಬೇಡಿಕೆ - ಆ.1 ಭಾರತೀಯ ಅಂಗಾಂಗ ದಾನ ದಿನಾಚರಣೆ

Organ donation
Published on

ಬೆಂಗಳೂರು: ರಾಜ್ಯದಲ್ಲಿ ಅಂಗಾಂಗ ವೈಲ್ಯ ಸಮಸ್ಯೆಗಳು ಹೆಚ್ಚಿದಂತೆ, ಬೇಡಿಕೆಯೂ ಹೆಚ್ಚಿದೆ. ಪ್ರಸಕ್ತ ಸಾಲಿನಲ್ಲಿ ಈವರೆಗೆ 121 ಮಂದಿ ಅಂಗಾಂಗ ದಾನ ಮಾಡಿದ್ದಾರೆ. ಐದು ಸಾವಿರಕ್ಕೂ ಅಧಿಕ ಮಂದಿ ಅಂಗಾಂಗ ಕಸಿಗೆ ಕಾಯುತ್ತಿದ್ದಾರೆ. ಈ ಪೈಕಿ ಮೂತ್ರಪಿಂಡಕ್ಕೆ ಬೇಡಿಕೆ ಹೆಚ್ಚಿದೆ.

ಭಾರತೀಯ ಅಂಗಾಂಗ ದಾನ ದಿನದ 15ನೇ ವರ್ಷದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯು (ಜೀವಸಾರ್ಥಕತೆ) ಅಂಗಾಂಗ ದಾನದ ಪ್ರತಿಜ್ಞೆ ಕೈಗೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ವ್ಯಕ್ತಿಯು ಬದುಕಿದ್ದಾಗಲೇ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಬಹುದಾಗಿದ್ದು, ಈ ನಿಟ್ಟಿನಲ್ಲಿ 2025ರ ಜು. 30ರ ವೇಳೆಗೆ ರಾಜ್ಯದಲ್ಲಿ 43,221 ಮಂದಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಧಾರವಾಡ ಜಿಲ್ಲೆ ಮುಂಚೂಣಿಯಲ್ಲಿದ್ದು, ಅಲ್ಲಿ 11,186 ಮಂದಿ ಅಂಗಾಂಗ ದಾನದ ಪ್ರತಿಜ್ಞೆ ಮಾಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಒಬ್ಬ ದಾನಿಯಿಂದ 8 ಮಂದಿಗೆ ಮರುಜೀವ:

ರಾಜ್ಯದಲ್ಲಿ ಅಂಗಾಂಗ ಮತ್ತು ಅಂಗಾಂಶಗಳ ತೀವ್ರ ಕೊರತೆಯಿದೆ. ಒಬ್ಬ ವ್ಯಕ್ತಿಯು ಅಂಗಾಂಗ ದಾನದ ಮೂಲಕ 8 ಜೀವಗಳನ್ನು ಉಳಿಸಬಹುದಾಗಿದೆ. ಹೃದಯ, ಮೂತ್ರಪಿಂಡ, ಪಿತ್ತಜನಕಾಂಗ, ಮೇದೋಜೀರಕ ಗ್ರಂಥಿ, ಸಣ್ಣ ಕರುಳು ಮತ್ತು ಶ್ವಾಸಕೋಶವನ್ನು ದಾನ ಮಾಡಬಹುದು. ಅಂಗಾಂಶದ ಮೂಲಕ 50ಕ್ಕೂ ಹೆಚ್ಚು ಮಂದಿಗೆ ನೆರವಾಗಬಹುದಾಗಿದೆ.

ಸರ್ಕಾರವು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ ಮೂತ್ರಪಿಂಡ, ಹೃದಯ, ಯಕೃತ್ ಮತ್ತು ಬಹು ಅಂಗಾಂಗ ವೈಫಲ್ಯಕ್ಕೆ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಕಸಿ ಶಸ್ತ್ರಚಿಕಿತ್ಸೆ ನಡೆಸುತ್ತಿದೆ. ಮೂತ್ರಪಿಂಡ ಕಸಿಗೆ 2 ಲಕ್ಷ ರೂ., ಯಕೃತ್ ಕಸಿಗೆ 11 ಲಕ್ಷ ರೂ., ಹೃದಯ ಕಸಿಗೆ 10 ಲಕ್ಷ ರೂ., ಶ್ವಾಸಕೋಶ ಕಸಿಗೆ 15 ಲಕ್ಷ ರೂ. ಹಾಗೂ ಹೃದಯ ಮತ್ತು ಶ್ವಾಸಕೋಶ ಕಸಿ 22 ಲಕ್ಷ ರೂ. ಗಳಂತೆ ಚಿಕಿತ್ಸಾ ಪ್ಯಾಕೇಜ್ ದರ ನಿಗದಿಪಡಿಸಿದೆ.

ಅಂಗಾಂಗಗಳ ನಿರೀಕ್ಷೆಯಲ್ಲಿ...

ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಮೂತ್ರಪಿಂಡ ಕಸಿಗಾಗಿ 4,582, ಯಕೃತ್‌ಗಾಗಿ 583, ಹೃದಯಕ್ಕಾಗಿ 133, ಶ್ವಾಸಕೋಶಕ್ಕಾಗಿ 31, ಹೃದಯ ಮತ್ತು ಶ್ವಾಸಕೋಶಕ್ಕಾಗಿ 13, ಮೂತ್ರಪಿಂಡ ಮತ್ತು ಮೇದೋಜೀರಕ ಗ್ರಂಥಿಗಾಗಿ 21, ಹೃದಯ ಮತ್ತು ಮೂತ್ರಪಿಂಡಗಾಗಿ ಒಬ್ಬರು ಹೆಸರು ನೋಂದಾಯಿಸಿ ಅಂಗಾಂಗಗಳಿಗಾಗಿ ಕಾಯುತ್ತಿದ್ದಾರೆ.

ಅಂಗಾಂಗ ದಾನಿಗಳು ವಿವರ

2017 - 68

2018 - 89,

2019 - 105

2020 - 35

2021 - 70

2022 - 151

2023 - 178

2024 - 162

2025 - 121

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net