

ಮೋಹನ್‌ದಾಸ್ ಮರಕಡ ಮಂಗಳೂರು
ಅಂಗಾಂಗ ದಾನ ಪ್ರಕ್ರಿಯೆಗೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ನೂರು ವಿದ್ಯಾರ್ಥಿಗಳು ಮುಂದಾಗಿದ್ದು, ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಪಣ ತೊಟ್ಟಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಘಟಕವಾಗಿರುವ ಸ್ನಾತಕೋತ್ತರ ಕಲಿಕೆ ಹಾಗೂ ಸಂಶೋಧನಾ ಕೇಂದ್ರ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಅಂಗಾಂಗ ದಾನದ ಜಾಗೃತಿಗೆ ಮುಂದಾಗಿದ್ದಾರೆ. ತಾವು ಅಂಗ ದಾನ ಮಾಡುವ ಪ್ರಕ್ರಿಯೆಗೆ ಸಹಿ ಹಾಕಿ ಜಾಗೃತಿ ಮೂಡಿಸುತ್ತಿರುವುದು ವಿಶೇಷ. 102 ವಿದ್ಯಾರ್ಥಿಗಳು ಸಹಿ ಹಾಕಲು ಮುಂದಾಗಿದ್ದು ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.
ನಾಡಿದ್ದು ಕಾರ್ಯಕ್ರಮ: ಆಳ್ವಾಸ್ ಕ್ಯಾಂಪಸ್‌ನಲ್ಲಿ ಮಾ.10ರಂದು ಮಧ್ಯಾಹ್ನ 3 ಗಂಟೆಗೆ ಆರ್ಗನ್ ಡೊನೇಶನ್ ಫೌಂಡೇಶನ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಸ್ಥೆ ಅಧ್ಯಕ್ಷ ಲಾಲ್ ಗೋಯಲ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮೊದಲಾದವರು ಭಾಗವಹಿಸುವರು. ಮಾಜಿ ಸಚಿವ ಅಭಯಚಂದ್ರ ಜೈನ್ ಅಂಗಾಂಗ ದಾನದ ಘೋಷಣೆ ಮಾಡಲಿದ್ದು, ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಜತೆಗೆ ಜಾಗೃತಿ ಕಾರ್ಯಕ್ರಮಕ್ಕೆ ಸಾಥ್ ನೀಡಲಿದ್ದಾರೆ.
ಉಳಿಯಲಿದೆ ಕನಿಷ್ಠ ಐದು ಜೀವ: ಓರ್ವ ಅಂಗಾಂಗ ದಾನ ಮಾಡಿದರೆ ಕನಿಷ್ಠ ಐದು ಜೀವ ಉಳಿಸಬಹುದು. ಆರೋಗ್ಯವಂತರ ಮೂತ್ರಪಿಂಡ, ಪಿತ್ತಜನಕಾಂಗ, ಹೃದಯ, ಕಣ್ಣು, ಶ್ವಾಸಕೋಶ, ಚರ್ಮ ಇತ್ಯಾದಿ ಅಂಗಾಂಗಗಳನ್ನು ಮಿದುಳು ನಿಷ್ಕ್ರಿಯಗೊಂಡು ಜೀವ ಕೊನೆಯಾಗುವ ಸಂದರ್ಭ ದಾನ ಮಾಡಬಹುದು. ಇದಕ್ಕೆ ಮೊದಲೇ ದಾನ ಮಾಡುವ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು. ಅಂಗಾಂಗ ದಾನದ ಕುರಿತು ಭಾರತೀಯ ಸಮುದಾಯದಲ್ಲಿ ಅರಿವು ಕಡಿಮೆ. ಆದರೆ ಹಲವರಲ್ಲಿ ಒಲವಿದೆ. ಅಂಗಾಂಗ ದಾನ ವೈಜ್ಞಾನಿಕವಾಗಿ ಮನುಷ್ಯ ಜೀವನವನ್ನು ಉಳಿಸುವ ಮತ್ತು ಹಲವರಿಗೆ ಜೀವದಾನ ನೀಡುವ ಪ್ರಕ್ರಿಯೆ. ಈ ಕುರಿತು ಜನರಲ್ಲಿ ಸರಿಯಾದ ವೈಜ್ಞಾನಿಕ ತಿಳಿವಳಿಕೆ ಮೂಡಬೇಕು.
ಅಂಗಾಂಗ ಕೊರತೆಯಿಂದ ಸಮಾಜದಲ್ಲಿ ಸಾವಿರಗಟ್ಟಲೆ ಜೀವಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯತತ್ಪರರಾಗಿರುವುದು ಸಮಾಜಕ್ಕೆ ಮಾದರಿ. ಅಂಗಾಂಗಗಳ ಮೇಲೆ ಅತಿ ಅವಲಂಬನೆ ತಪ್ಪಿಸಿ ಬದುಕನ್ನು ಸುಗಮಗೊಳಿಸುವ ಹಾಗೂ ಈ ಕುರಿತ ಜಾಗೃತಿ ಹೆಚ್ಚು ವಿಸ್ತಾರ ಆಗುವಂತೆ ಮಾಡಲು ಹೆಚ್ಚು ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು.
ಡಾ.ಕುರಿಯನ್ ಪ್ರಾಂಶುಪಾಲರು, ಆಳ್ವಾಸ್ ಕಾಲೇಜು ಮೂಡುಬಿದಿರೆ
ಒಂದು ಸಮೀಕ್ಷೆ ಪ್ರಕಾರ ಪ್ರಪಂಚದ 1.5 ಲಕ್ಷ ಜನರಿಗೆ ಕಿಡ್ನಿ ಅವಶ್ಯಕತೆ ಇದ್ದರೆ ಅದನ್ನು ಪೂರೈಸಲು ಶಕ್ತವಾಗಿರುಗುವುದು ಕೇವಲ 3 ಸಾವಿರ. 30 ಜನರಲ್ಲಿ ಒಬ್ಬರ ಕಿಡ್ನಿಯ ಅವಶ್ಯಕತೆ ಮಾತ್ರ ಪೂರೈಸಲು ಸಾಧ್ಯವಾಗಿದೆ. ಶೇ.90ರಷ್ಟು ಕಿಡ್ನಿ ಅವಶ್ಯಕತೆ ಇರುವ ಜನ, ದಾನಿಗಳಿಲ್ಲದೆ ಸಾವಿನ ಬಾಗಿಲು ತಟ್ಟುತ್ತಿದ್ದಾರೆ. ಅಂಗಾಂಗ ದಾನ, ದೇಹ ದಾನದ ವಿಚಾರ ಬಂದಾಗ ಹಿಂದೆ ಸರಿಯುವವರೇ ಹೆಚ್ಚು. ಹೆಚ್ಚು ಜನ ಅಂಗಾಂಗ ದಾನಕ್ಕೆ ಮುಂದಾದರೆ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಿದೆ. ನಾವು ಬದುಕಿರುವಾಗ ಇತರರಿಗೆ ಎಷ್ಟು ಉಪಯೋಗ ಆಗುತ್ತದೋ ಗೊತ್ತಿಲ್ಲ. ಆದರೆ ಅಂಗಾಂಗ ದಾನ ಮಾಡುವ ಮೂಲಕ ನಶಿಸಿದ ಮೇಲೂ ಇತರರ ಬಾಳಿಗೆ ಬೆಳಕಾಗಿ ನಾವು ಜೀವಂತವಾಗಿರಬಹುದು ಎಂಬುದು ನನ್ನ ಅಭಿಪ್ರಾಯ.
ಹರಿಪ್ರಸಾದ್ ಎಂಎಸ್ಸಿ ವಿದ್ಯಾರ್ಥಿ ಆಳ್ವಾಸ್ ಕಾಲೇಜು