ಪಶ್ಚಿಮಘಟ್ಟಗಳ ಅರಣ್ಯ ಸ್ವರೂಪ ಬದಲಾಗುವ ಸಾಧ್ಯತೆ

MUDIGERE
ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಶೃಂಗೇರಿಯ ಜೋಗಿಬೈಲು ಬೀಸ್ ಸೆಂಟರ್ ನಿಂದ ಕುವೆಂಪು ಪರಿಸರದಿಂದ ತೇಜಸ್ವಿ ನೆಲದವರೆಗೆ ಪರಿಸರ ಕೃಷಿ ಜಾಗೃತಿ ಅಭಿಯಾನ ಸಮಾರೋಪ ಸಮಾರಂಭ ನಡೆಯಿತು.
Published on

ಮೂಡಿಗೆರೆ: ದಿನೇ ದಿನೇ ತಾಪಮಾನ ಹೆಚ್ಚವಾಗುತ್ತಿರುವುದು ಪಶ್ಚಿಮಘಟ್ಟದ ಅರಣ್ಯದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಇದೇ ರೀತಿ ತಾಪಮಾನ ಏರಿಕೆಯಾಗುತ್ತ ಹೋದಲ್ಲಿ ಪಶ್ಚಿಮಘಟ್ಟದ ಅರಣ್ಯ ಸ್ವರೂಪವೇ ಬದಲಾಗುವ ಸಾಧ್ಯತೆಯಿದೆ ಎಂದು ಶಿರಸಿ ಕೃಷಿಕ ಹಾಗೂ ಭೂ ದೃಶ್ಯ ಪರಿಸ್ಥಿತಿ ವಿಜ್ಞಾನದ ಸಂಶೋಧಕ ಬಾಲಚಂದ್ರ ಸಾಯಿಮನೆ ಆತಂಕ ವ್ಯಕ್ತಪಡಿಸಿದರು.
ಮೂಡಿಗೆರೆ ತೋಟಗಾರಿಕಾ ವಿದ್ಯಾಲಯದಲ್ಲಿ ಶುಕ್ರವಾರ ಶೃಂಗೇರಿ ಜೋಗಿಬೈಲಿನ ಬೀಸ್ ಸೆಂಟರ್‌ನಿಂದ ನಡೆದ ಕುವೆಂಪು ಪರಿಸರದಿಂದ ತೇಜಸ್ವಿ ನೆಲದವರೆಗೆ ಪರಿಸರ ಕೃಷಿ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದೊಂದು ಪ್ರದೇಶದ ಒಂದೊಂದು ಸಸ್ಯಕ್ಕೂ ಇಂತಿಷ್ಟೇ ತಾಪಮಾನ ತಡೆದುಕೊಳ್ಳುವ ಶಕ್ತಿ ಇರುತ್ತದೆ. ದಿನೇ ದಿನೇ ತಾಪಮಾನ ಹೆಚ್ಚಾದಾಗ ತಾಪಮಾನ ತಡೆದುಕೊಳ್ಳಲು ಸಾಧ್ಯವಾಗದೆ ಕೆಲ ಗಿಡಮರಗಳು ನಾಶವಾಗುವ ಸಾಧ್ಯತೆಯಿದೆ ಎಂದರು.
ಇದೇ ರೀತಿ ತಾಪಮಾನ ಹೆಚ್ಚಾಗುತ್ತಾ ಹೋದಲ್ಲಿ ಪಶ್ಚಿಮಘಟ್ಟ ಪ್ರದೇಶದ ಅಮೂಲ್ಯ ಸಸ್ಯ ಸಂಕುಲ ಉಷ್ಣಾಂಶ ತಡೆದುಕೊಳ್ಳಲಾಗದೆ ನಾಶವಾಗುವ ಸಾಧ್ಯತೆಯಿದೆ. ಒಂದು ವೇಳೆ ನಾಶವಾದಲ್ಲಿ ಆ ಪ್ರದೇಶದಲ್ಲಿ ತಾಪಮಾನ ತಡೆದುಕೊಳ್ಳುವ ಮರಗಿಡಗಳು ಮಾತ್ರ ಉಳಿಯುವುದರಿಂದ ಪಶ್ಚಿಮ ಘಟ್ಟದ ಅರಣ್ಯದ ಸ್ವರೂಪವೇ ಬದಲಾಗಿದೆ. ಕೇವಲ ಅರಣ್ಯದ ಸ್ವರೂಪ ಮಾತ್ರವಲ್ಲದೆ ಜೀವಸಂಕುಲದ ಮೇಲೂ ಪರಿಣಾಮ ಉಂಟಾಗಲಿದೆ ಎಂದರು.
ಎಲೆ ಉದುರಿಸುವ ಸಸ್ಯಗಳು ತಾಪಮಾನ ಹೆಚ್ಚಾದಾಗ ಎಲೆ ಉದುರಿಸಿಕೊಂಡು ಆರಾಮಾಗಿರುತ್ತವೆ. ಆದರೆ ನಿತ್ಯಹರಿದ್ವರ್ಣವನದ ಸಸ್ಯಗಳಿಗೆ ತಾಪಮಾನ ತಡೆದುಕೊಳ್ಳುವ ಶಕ್ತಿಯಿಲ್ಲ. ಈ ಸಸ್ಯಗಳು ತಾಪಮಾನ ಹೆಚ್ಚಾದಂತೆಲ್ಲಾ ನಾಶವಾಗುತ್ತಾ ಹೋಗುತ್ತವೆ. ಮಲೆನಾಡು ಭಾಗದಲ್ಲಿ ತಾಪಮಾನ ಇನ್ನೂ ಹೆಚ್ಚಾದಲ್ಲಿ ಇಲ್ಲಿನ ಪ್ರಮುಖ ಬೆಳೆಗಳಾದ ಕಾಳುಮೆಣಸು, ಏಲಕ್ಕಿ, ದಾಲ್ಚಿನ್ನಿ, ಕೆಲಜಾತಿಯ ನಿಂಬೆ, ಕೋಕೋ ಬೆಳೆಗಳು ನಾಶವಾಗುವ ಅಪಾಯವಿದೆ. ಹೀಗಾಗಿ ಪಶ್ಚಿಮಘಟ್ಟದ ಹವಾಗುಣ ಅರ್ಥ ಮಾಡಿಕೊಂಡು ಅದನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದು ಕರೆನೀಡಿದರು.
ತೋಟಗಾರಿಕೆ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ.ಟಿ.ಪಿ.ಭರತ್ ಕುಮಾರ್, ಶೃಂಗೇರಿಯ ಬೀಸ್ ಸೆಂಟರ್ ಅಧ್ಯಕ್ಷ ಗುರುಮೂರ್ತಿ ಜೋಗಿಬೈಲು, ಉಪಾಧ್ಯಕ್ಷೆ ವೈ.ಎಸ್.ವಸುಧಾ, ನಾಗರಾಜ ಕೂವೆ, ನಾದಮಣಿ ನಾರ್ಕೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net