ಸಾಮಾನ್ಯ ಕಾರ್ಯಕರ್ತರೇ ನನಗೆ ಸ್ಟಾರ್ ಪ್ರಚಾರಕರು

EX DCM K S Eshwarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಪ್ರಚಾರಕ್ಕೆಂದು ಬೇರೆ ಯಾವ ದೊಡ್ಡ ನಾಯಕರೂ ನನಗಿಲ್ಲ. ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅಂಥವರು ಹಲವರಿದ್ದು, ಸಾಮಾನ್ಯ ಕಾರ್ಯಕರ್ತರೇ ನನಗೆ ಸ್ಟಾರ್ ಪ್ರಚಾರಕರು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ನನ್ನ ಜತೆ ಕೈಜೋಡಿಸಿರುವ ಸಾವಿರಾರು ಕಾರ್ಯಕರ್ತರ ಮುಖವನ್ನು ನಾನು ಇದೇ ಮೊದಲ ಬಾರಿಗೆ ನೋಡಿದ್ದು. ಆದರೆ ಅವರು ನನ್ನನ್ನು, ನನ್ನ ಉದ್ದೇಶವನ್ನು, ಹಿಂದುತ್ವ ಮತ್ತು ಪಕ್ಷ ಉಳಿಸುವ ನನ್ನ ಬದ್ಧತೆಯನ್ನು ನಂಬಿ ಜತೆಯಾಗಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಿಂದು ಭಕ್ತನಿಗೆ ರಾಷ್ಟ್ರಭಕ್ತ ಮುಸ್ಲಿಮರ ಮತಗಳು ಖಂಡಿತವಾಗಿಯೂ ಬೀಳುತ್ತದೆ. ನನ್ನನ್ನು ಅರ್ಥ ಮಾಡಿಕೊಂಡ, ನನ್ನಿಂದ ಸಹಾಯ ಪಡೆದ ಮುಸ್ಲಿಮರು ಖಂಡಿತವಾಗಿಯೂ ನನಗೆ ಮತ ಚಲಾಯಿಸುತ್ತಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದು, ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ನಾಮಪತ್ರ ಸಲ್ಲಿಕೆ ಬಳಿಕ ಬೆಂಬಲ ದ್ವಿಗುಣವಾಗಲಿದೆ. ಈಗಾಗಲೇ ಎಂಟು ಕ್ಷೇತ್ರದಲ್ಲೂ ಕಾರ್ಯಕರ್ತರನ್ನು ಸಂಘಟಿಸಲಾಗುತ್ತಿದೆ ಎಂದರು.
ನನ್ನ ಬೆಂಬಲಕ್ಕೆ ಹಿಂದುಳಿದ ವರ್ಗದ ದೊಡ್ಡ ಸಂಖ್ಯೆಯ ಜನ ನಿಂತಿದ್ದಾರೆ. ದಲಿತರು, ಬ್ರಾಹ್ಮಣರು, ಲಿಂಗಾಯಿತರು ಮತ್ತು ಒಕ್ಕಲಿಗರು ನನನ್ನು ಬೆಂಬಲಿಸುತ್ತಿದ್ದಾರೆ. ಇದು ನನಗೆ ದೊಡ್ಡ ಆತ್ಮವಿಶ್ವಾಸ ಮೂಡಿಸಿದೆ. ನಾನು ಯಾವ ಕಾರಣಕ್ಕೂ ಹಿಂದೆ ಸರಿಯಲ್ಲ. ನನ್ನನ್ನು ನಂಬಿ ಲಕ್ಷಾಂತರ ಕಾರ್ಯಕರ್ತರು ಕೈಜೋಡಿಸಿದ್ದು, ಅವರನ್ನು ನಡುವೆ ಕೈ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಕೆಲವು ಶಕ್ತಿಗಳು ವಿನಾಕಾರಣ ಸುದ್ದಿ ಹಬ್ಬಿಸುತ್ತಿದ್ದಾರೆ. ಸೋಲಿನ ಭಯವೇ ಇದಕ್ಕೆ ಕಾರಣ. ಆದರೆ ನನ್ನ ಉದ್ದೇಶದಿಂದ ನಾನು ಹಿಂದೆ ಸರಿಯುವುದಿಲ್ಲ. ನನ್ನ ಕಾರ್ಯಕರ್ತರು ಇಂತಹ ಯಾವುದೇ ಸುದ್ದಿಯನ್ನು ನಂಬಬಾರದು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net