

ಶಿವಮೊಗ್ಗ: ಅರವಿಂದ ನಗರದ ಡಿ.ಪುನೀತ್ ಅವರು ಶಿವಮೊಗ್ಗ ಐ-ಕಾರ್ನರ್ ಹಾಗೂ ಇತರರ ವಿರುದ್ಧ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ದೂರನ್ನು ಪುರಸ್ಕರಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಂದ ಯಾವುದೇ ಹಣ ಸ್ವೀಕರಿಸದೆ ಆದೇಶವಾದ 45 ದಿನದೊಳಗೆ ಹೊಸ ಡಿಸ್‌ಪ್ಲೇ ಅಳವಡಿಸಿಕೊಡಬೇಕು ಮತ್ತು ಇತರ ಸೂಕ್ತ ರಿಪೇರಿ ಮಾಡಿ ಸರಿಪಡಿಸಿ ಕೊಡುವಂತೆ ಆದೇಶಿಸಿದೆ.
ಅರ್ಜಿದಾರ ಪುನೀತ್ ಅವರು ವಕೀಲರ ಮೂಲಕ 1ನೇ ಎದುರುದಾರ ಶಿವಮೊಗ್ಗದ ಐಕಾರ್ನರ್‌ನ ಮಾಲೀಕರು/ವ್ಯವಸ್ಥಾಪಕರು ಮತ್ತು 2ನೇ ಎದುರುದಾರ ಬೆಂಗಳೂರು ಯುಬಿಸಿಟಿ ಕಸ್ಟಮರ್ ಕಂಪ್ಲೇಂಟ್ ಮ್ಯಾನೇಜರ್ ಆ್ಯಂಡ್ ಇನ್ಫೋರ್ಟರ್ ಮತ್ತು ಮಲ್ಲೇಶ್ವರಂನ ಅಂಪಲ್ ಟಕ್ನೋಲಜಿಸ್ ಪ್ರೈ.ಲಿ(ಐ-ಕೇರ್) ಸರ್ವೀಸ್ ಮ್ಯಾನೇಜರ್ ವಿರುದ್ಧ ಸೇವಾನ್ಯೂನ್ಯತೆ ದೂರು ಸಲ್ಲಿಸಿದ್ದರು.
ಪುನೀತ್ ಅವರು 2021ರ ಸೆ.28ರಂದು 79,900 ರೂ.ಗೆ ಐಫೋನ್ ಖರೀದಿ ಮಾಡಿದ್ದರು. 2-3 ತಿಂಗಳ ಹಿಂದೆ ಮೊಬೈಲ್‌ನ ಡಿಸ್‌ಪ್ಲೇನಲ್ಲಿ ಬಣ್ಣ ಬಣ್ಣದ ಗೆರೆಗಳು ಕಾಣಿಸಿಕೊಂಡಿತ್ತು. ಇದರ ಬಗ್ಗೆ 1ನೇ ಎದುರುದಾರರ ಗಮನಕ್ಕೆ ತಂದಿದ್ದರು. ಈ ವೇಳೆ ಅವರು ಸರ್ವಿಸ್ ಸೆಂಟರ್‌ಗೆ ಭೇಟಿ ನೀಡುವಂತೆ ಸೂಚಿಸಿದ್ದರು.
ಡಿಸ್‌ಪ್ಲೇ ಹಾಳಾಗಿದ್ದು, ಸರಿಪಡಿಸಲು 26,492 ರೂ. ಆಗುತ್ತದೆಂದು ಸರ್ವಿಸ್ ಸೆಂಟರ್ ಅವರು ತಿಳಿಸಿದ್ದರು. ತಮ್ಮ ಕಂಪನಿ ಐಓಎಸ್ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿದಾಗ ಡಿಸ್‌ಪ್ಲೇ ಹಾಳಾಗಿರುವುದರಿಂದ ನಿಮ್ಮ ಖರ್ಚಿನಲ್ಲಿ ಸರಿಪಡಿಸಿ ಎಂದು ಕೇಳಿಕೊಂಡಿದ್ದು, ವಿನಾಕಾರಣ ಇಲ್ಲಸಲ್ಲದ ನೆಪ ಹೇಳಿ ದೂರುದಾರರನ್ನು ಅಲೆಯುವಂತೆ ಮಾಡಿದ್ದರು. ಈ ಬಗ್ಗೆ ಪುನೀತ್ ಆಯೋಗಕ್ಕೆ ದೂರು ನೀಡಿದ್ದರು.
ಪ್ರಮಾಣಪತ್ರ, ದಾಖಲೆಗಳು ಮತ್ತು ವಾದ ವಿವಾದಗಳನ್ನು ಆಲಿಸಿದ ಆಯೋಗವು ಎದುರುದಾರರು ಸೇವಾ ನ್ಯೂನತೆ ಎಸಗಿದ್ದಾರೆಂದು ತೀರ್ಮಾನಿಸಿ 45 ದಿನದೊಳಗೆ ಹೊಸ ಡಿಸ್‌ಪ್ಲೇ ಅಳವಡಿಸಿಕೊಡುವಂತೆ ಸೂಚಿಸಿತು. ತಪ್ಪಿದಲ್ಲಿ ಎದುರದಾರರ ಜಿಎಸ್‌ಟಿ ಮೊತ್ತವನ್ನು ಕಡಿತಗೊಳಿಸಿ ಮೊಬೈಲ್ ಮೊತ್ತ 79,900 ರೂ. ಪಾವತಿಸಬೇಕು. ಮಾನಸಿಕ ಹಾನಿಗೆ 5000 ರೂ.ಪರಿಹಾರ ಹಾಗೂ 5000 ರೂ. ವ್ಯಾಜ್ಯ ಖರ್ಚು ವೆಚ್ಚದ ಬಾಬ್ತಾಗಿ ಪಾವತಿಸಬೇಕು. ತಪ್ಪಿದಲ್ಲಿ ಸದರಿ ಮೊತ್ತಗಳನ್ನು ಪೂರ್ತಿ ಸಂದಾಯ ಮಾಡುವವರೆಗೆ ಶೇ. 10 ಬಡ್ಡಿ ಸಹಿತವಾಗಿ ಪಾವತಿಸಬೇಕು ಎಂದು ಆಯೋಗದ ಜಿಲ್ಲಾಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠ ಆದೇಶಿಸಿದೆ.