

ಮೈಸೂರು: ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿದ್ದರೂ ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸಲು ರಾಜ್ಯಕ್ಕೆ ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಮಾನವನ್ನು ಕಾವೇರಿ ಕ್ರಿಯಾ ಸಮಿತಿ ಖಂಡಿಸಿದೆ.
ಸಭೆ ಕರೆದು ಮುಂದಿನ ರೂಪುರೇಷಗಳ ಕುರಿತು ಚರ್ಚಿಸಿ ಲೋಕಸಭಾ ಚುನಾವಣಾ ಮುಗಿದ ಬಳಿಕ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ಜತೆಗೆ, ಪ್ರತಿ ಶನಿವಾರ ದೊಡ್ಡಗಡಿಯಾರದ ಬಳಿ ಧರಣಿ ಸಹ ಮುಂದುವರಿಯಲಿದೆ ಎಂದು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಿತಿಯ ಗೌರವಾಧ್ಯಕ್ಷ ಹಾಗೂ ಎಂಎಲ್ಸಿ ಸಿ.ಎನ್.ಮಂಜೇಗೌಡ ಮಾತನಾಡಿ, ಕಾವೇರಿಗಾಗಿ ಕಳೆದ 100 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಚುನಾವಣೆ ಕಾರಣ ಈ ಭಾಗದ ಸಚಿವರು, ಶಾಸಕರು ಗಮನ ನೀಡಲಿಲ್ಲ. ಈ ಭಾಗದಿಂದ ಆಯ್ಕೆಯಾಗಿರುವ ಸಂಸದರು ಕಾವೇರಿ ವಿಷಯ ಕುರಿತಂತೆ ಕೇಂದ್ರದ ಮೇಲೆ ಒತ್ತಡ ಹೇರಲಿಲ್ಲ. ಹೊಸದಾಗಿ ಆಯ್ಕೆಯಾಗುವ ಸಂಸದರಾದರೂ ಈ ಕುರಿತು ಗಮನ ನೀಡಬೇಕು ಎಂದರು.
ಮೇಕೆದಾಟು ಕುಡಿಯುವ ನೀರು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಮಳೆಗಾಲದಲ್ಲಿ ಕಾವೇರಿ ಕಣಿವೆಯ ಎಲ್ಲ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.
ಪದಾಧಿಕಾರಿಗಳಾದ ಮೂಗೂರು ನಂಜುಂಡಸ್ವಾಮಿ, ಮೆಲ್ಲಹಳ್ಳಿ ಮಹದೇವಸ್ವಾಮಿ, ಎಂ.ಜೆ.ಸುರೇಶ್‌ಗೌಡ, ಹನುಮಂತೇಶ್, ಪ್ರಕಾಶ್, ಜಿ.ನಾಗರಾಜು ಇತರರಿದ್ದರು.