ಸೇವಾನ್ಯೂನತೆಗೆ ಪರಿಹಾರ ನೀಡಲು ಆದೇಶ

Consumar court
Published on

ಶಿವಮೊಗ್ಗ: ಕ್ರೆಡಿಟ್ ಕಾರ್ಡ್ ಸಂಬಂಧ ಸೇವಾ ನ್ಯೂನತೆ ಎಸಗಿದ ಕಾರಣಕ್ಕಾಗಿ ಗ್ರಾಹಕನಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕೆನರಾ ಬ್ಯಾಂಕ್ ಮ್ಯಾನೇಜರ್‌ಗೆ ಆದೇಶಿಸಿದೆ.

2024ರ ಏಪ್ರಿಲ್‌ನಲ್ಲಿ ಶಿವಮೊಗ್ಗದ ವಿಷ್ಣುಮೂರ್ತಿ ಕೇಕುಡ ಅವರ ಕೆನರಾ ಬ್ಯಾಂಕ್ ಉಳಿತಾಯ ಖಾತೆಯ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗಿ 1.29 ಲಕ್ಷ ರೂ. ಕಡಿತಗೊಂಡಿತ್ತು. ಈ ಬಗ್ಗೆ ಬ್ಯಾಂಕ್‌ಗೆ ಸರಿಪಡಿಸುವಂತೆ ಹಲವಾರು ಬಾರಿ ದೂರು ನೀಡಿದ್ದರೂ ಕ್ರಮ ಕೈಗೊಳ್ಳದೆ, ತಮ್ಮ ಎಸ್‌ಬಿ ಖಾತೆಗೆ ಮೊತ್ತ ಮರುಜಮೆ ಮಾಡಿರಲಿಲ್ಲ. ಈ ಬಗ್ಗೆ ಶಿವಮೊಗ್ಗದ ಶಿವಮೂರ್ತಿ ಸರ್ಕಲ್‌ನ ಕೆನರಾ ಬ್ಯಾಂಕ್ ಮ್ಯಾನೇಜರ್ ಹಾಗೂ ಬೆಂಗಳೂರು ಕಾನ್‌ಕಾರ್ಡ್ ವಿಭಾಗದ ಕೆನರಾ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಆಯೋಗಕ್ಕೆ ದೂರು ಸಲ್ಲಿಸಿದರು.

ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠ ದೂರುದಾರರು ಮತ್ತು ಎದುರುದಾರರ ಸಾಕ್ಷಿ, ಪ್ರಮಾಣಪತ್ರ ಮತ್ತು ದಾಖಲೆ ಪರಿಶೀಲಿಸಿತ್ತು. ಆರ್‌ಬಿಐ ಮಾರ್ಗಸೂಚಿ ಆಧಾರದ ಮೇಲೆ ಸೇವಾನ್ಯೂನತೆ ಎಸಗಿರುವುದಾಗಿ ಪರಿಗಣಿಸಿ 45 ದಿನಗಳೊಳಗೆ 1,33,39 ರೂ. ಗಳನ್ನು ವಾರ್ಷಿಕ ಶೇ.9ರ ಬಡ್ಡಿಯೊಂದಿಗೆ 2024ರ ಜೂ.14ರಿಂದ ಪೂರ್ಣ ಹಣ ನೀಡುವವರೆಗೂ ನೀಡಬೇಕು. ತಪ್ಪಿದಲ್ಲಿ ಈ ಮೊತ್ತಕ್ಕೆ ಶೇ.12ರಂತೆ ಬಡ್ಡಿ ಸಹಿತ ಪಾವತಿಸಬೇಕು ಎಂದು ಆದೇಶಿಸಿದೆ. ಅಲ್ಲದೆ, ಮಾನಸಿಕ ಹಿಂಸೆಗಾಗಿ 25 ಸಾವಿರ ರೂ. ಮತ್ತು ವ್ಯಾಜ್ಯದ ಖರ್ಚು 10 ಸಾವಿರ ರೂ. ನೀಡಬೇಕು. ಇಲ್ಲವಾದಲ್ಲಿ ವಾರ್ಷಿಕ ಶೇ.10ರ ಬಡ್ಡಿಯನ್ನು ಈ ಆದೇಶವಾದ ದಿನಾಂಕದಿಂದ ಹಣ ಪಾವತಿಸುವವರೆಗೂ ನೀಡಬೇಕೆಂದು ನಿರ್ದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net