ವಿಮೆ ಹಣ ಪಾವತಿಸಲು ರೈಲ್ವೆ ಇಲಾಖೆಗೆ ಆದೇಶ

web 66
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗ ಹುಬ್ಬಳ್ಳಿ ನೈಋತ್ಯ ರೈಲ್ವೆ ಇಲಾಖೆಗೆ ಆದೇಶಿಸಿದೆ.

ಹುಬ್ಬಳ್ಳಿಯ ಕೇಶವನಗರದ ನಿವಾಸಿ ಕೀರ್ತಿವತಿ ಎಂಬುವರು ಪತಿ ಸುಧೀ0ದ್ರ ಕುಲಕರ್ಣಿ ಅವರೊಂದಿಗೆ 2023ರ ಫೆ. 4ರಂದು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು. ರಾತ್ರಿ ಸುಧೀ0ದ್ರ ಅವರು ರೈಲ್ವೆಯ ಶೌಚಗೃಹಕ್ಕೆ ಹೋದಾಗ ಬೋಗಿಯ ಬಾಗಿಲು ತೆರೆದಿದ್ದ ಕಾರಣ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದರು. ರಿಸರ್ವ್ ಕ್ಲಾಸ್‌ಗೆ ಹಣ ಪಡೆದು ಬೋಗಿಯಲ್ಲಿ ಟಿಟಿಇ/ ಗಾರ್ಡ್ ಇರದೆ, ಬಾಗಿಲನ್ನು ಮುಚ್ಚದಿರುವ ಕಾರಣ ಅವಘಡ ನಡೆದಿದೆ ಎಂದು ದೂರುದಾರರು ದೂರಿದ್ದರು. ಆದರೆ, ದುರ್ಘಟನೆಯಿಂದ ಮೃತಪಟ್ಟರೆ ಇಲಾಖೆಯಿಂದ 8 ಲಕ್ಷ ರೂಪಾಯಿ ಪಡೆಯಬೇಕಾದರೆ ರೈಲ್ವೆ ಟ್ರಿಬುನಲ್‌ನಲ್ಲಿ ದಾವೆ ಹಾಕಿ ಪಡೆಯಬೇಕು. ಗ್ರಾಹಕರ ಆಯೋಗದಲ್ಲಿ ವಿಮಾ ಹಣ ಕೇಳಲು ಅರ್ಹರಲ್ಲ ಎಂದು ಇಲಾಖೆ ನಿರಾಕರಿಸಿತ್ತು. ಇದರಿಂದ ನೊಂದ ಕೀರ್ತಿವತಿ ಅವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.

ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ವಿಚಾರಣೆ ನಡೆಸಿದರು. ದೂರುದಾರರ ಪತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಇಲಾಖೆಯ ನಿರ್ಲಕ್ಷ÷್ಯದಿಂದ ಮೃತ ಹೊಂದಿರುವುದು ಆಯೋಗದ ಗಮನಕ್ಕೆ ಬಂದಿದೆ. ರೈಲ್ವೆ ನಿಯಮಾವಳಿ ಪ್ರಕಾರ ಮೃತನ ಕುಟುಂಬದವರು 8 ಲಕ್ಷ ರೂಪಾಯಿ ವಿಮಾ ಹಣ ಪಡೆಯಲು ಅರ್ಹ ಎಂದು ಎದುರುದಾರರು ಒಪ್ಪಿದ್ದಾರೆ. ಆದರೆ, ವಿಮಾ ಹಣವನ್ನು ರೈಲ್ವೆ ಟ್ರಿಬುನಲ್‌ನಲ್ಲಿ ಪಡೆಯಬೇಕು, ಆಯೋಗದ ವ್ಯಾಪ್ತಿಯಲ್ಲಿ ಪಡೆಯಲು ಬರುವುದಿಲ್ಲ ಎಂದು ಕ್ಲೇಮ್ ನಿರಾಕರಿಸಿರುವುದು ಸರಿಯಲ್ಲ. ಪ್ರಕರಣ ಗ್ರಾಹಕರ ಪರಿಹಾರ ಆಯೋಗ ವ್ಯಾಪ್ತಿಗೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು. ಎದುರುದಾರರಿಗೆ 1 ತಿಂಗಳೊಳಗೆ 8 ಲಕ್ಷ ರೂಪಾಯಿ ವಿಮಾ ಹಣ ಪಾವತಿಸಬೇಕು. ಜತೆಗೆ ಪ್ರಕರಣದ ಖರ್ಚು ವೆಚ್ಚ 10,000 ರೂ. ಕೊಡಬೇಕು ಎಂದು ನೈಋತ್ಯ ರೈಲ್ವೆ ಇಲಾಖೆಗೆ ನಿರ್ದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net