ಅನುಮತಿ ನೀಡಿದವರ ಬಗ್ಗೆ ತನಿಖೆಗೆ ಆದೇಶ: ಸಚಿವ ಈಶ್ವರ ಖಂಡ್ರೆ ಭರವಸೆ

16
Published on

ಮೈಸೂರು: ನಗರದಲ್ಲಿ 40 ಮರ ಕಡಿಯಲು ಅನುಮತಿ ನೀಡಿದವರ ವಿರುದ್ಧ ಸೂಕ್ತ ತನಿಖೆ ನಡೆಸಲು ಆದೇಶಿಸಿದ್ದೇನೆ. ಶೀಘ್ರವೇ ವರದಿ ಕೈ ಸೇರಲಿದ್ದು, ಅದು ಬಂದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದ ಅರಣ್ಯ ಭವನದಲ್ಲಿ ಸಚಿವರನ್ನು ಭಾನುವಾರ ಭೇಟಿಯಾಗಿ ಮನವಿ ಸಲ್ಲಿಸಿದ ಪರಿಸರ ಸಂರಕ್ಷಣೆ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ನಗರದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ನೀಡಿದ ಮರಗಳನ್ನು ಕಡಿಯಲು ಅರಣ್ಯ ಅನುಮತಿ ನೀಡುತ್ತಿವೆ. ಇದರ ಹಿಂದೆ ಲಾಬಿ ಇರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.

ಸಾರ್ವಜನಿಕರಿಗೆ ತೊಂದರೆ ಆಗದ ಯಾವುದೇ ಮರಗಳನ್ನು ಕಡಿಯಲು ಅನುಮತಿ ನೀಡಬಾರದು. ಆದರೆ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಹೈದರ್‌ಆಲಿ ರಸ್ತೆ ವರೆಗೆ ರಸ್ತೆ ಬದಿ ಯಾವುದೇ ತೊಂದರೆ ಆಗದಂತೆ ಇದ್ದ 40 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದ್ದು, ರಾತ್ರೋರಾತ್ರಿ ಕಳ್ಳರಂತೆ ಮರಗಳನ್ನು ಕಡಿಯಲಾಗಿದೆ ಎಂದು ದೂರಿದರು.

ಅಲ್ಲದೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಅವರು ಟಿಂಬರ್ ಮಾಫಿಯಾ ಜತೆ ಹಣದ ಒಡಂಬಡಿಕೆ ಮಾಡಿಕೊಂಡು ನಗರದ ಹಲವು ಕಡೆ ಅಂದಾಜು 600ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಗುರುತು ಮಾಡಿರುವುದನ್ನು ಸಚಿವರ ಗಮನಕ್ಕೆ ತರಲಾಯಿತು. ಪರಿಸರ ಹಾಗೂ ಸರ್ಕಾರಕ್ಕೆ ಇದರಿಂದ ನಷ್ಟವಾಗುತ್ತಿದೆ. ಆದ್ದರಿಂದ ಇಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಅರಣ್ಯ ಸಂರಕ್ಷಣೆ, ಹೊಸ ಗಿಡ, ಮರಗಳನ್ನು ರಕ್ಷಣೆ ಮಾಡಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಅವರಿಗೆ ಆದೇಶಿಸಿದರು. ಅಲ್ಲದೆ ಸಹಾಯಕ ಅರಣ್ಯ ಸಂರಕ್ಷಣಾಕಾರಿ ರವಿಂದ್ರ ಅವರ ವಿರುದ್ಧದ ಆರೋಪಕ್ಕೆ ಲಿಖಿತ ದೂರರ್ಜಿ ನೀಡಿದರೆ ತನಿಖೆ ಮಾಡುವುದಾಗಿ ಭರವಸೆ ನೀಡಿದರು.

ಸಾಮಾಜಿಕ ಚಳವಳಿಗಾರರಾದ ಅರವಿಂದ ಶರ್ಮ, ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನುಮೋಹನ್, ಮುಖಂಡರಾದ ಭಾನುಪ್ರಶಾಂತ್, ದಯಾನಂದಸಾಗರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net