

ಶಿವಮೊಗ್ಗ: ವಿಮಾ ಕಂಪನಿ ವಿರುದ್ಧ ಸೇವಾನ್ಯೂನ್ಯತೆ ಕುರಿತು ಆಪಾದಿಸಿ ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರ ಪೀಠವು ಅರ್ಜಿದಾರರಿಗೆ 15 ಲಕ್ಷ ರೂ. ಪರಿಹಾರ ಒದಗಿಸುವಂತೆ ಆದೇಶಿಸಿದೆ.
ವಿನೋಬನಗರದ ಜಿ.ಆರ್.ವೇದಾವತಿ ಎಂಬುವರ ಪತಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದು ಈ ವಾಹನಕ್ಕೆ 15 ಲಕ್ಷ ರೂ.ಗಳ ಪರಿಹಾರದ ವಿಮಾ ಯೋಜನೆಯ ಪಾಲಿಸಿ ಪಡೆದಿದ್ದರು. ಆದರೆ ವಿಮಾ ಕಂಪನಿ ಅವರು ನಾನಾ ಕಾರಣ ನೀಡಿ ವಿಮಾ ಪರಿಹಾರ ಪಾವತಿಸಲು ನಿರಾಕರಿಸಿ ಸೇವಾ ನ್ಯೂನ್ಯತೆ ತೋರಿದ್ದರು. ಈ ಪ್ರಕರಣವು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಅರ್ಜಿದಾರರು ಸೂಕ್ತ ಪರಿಹಾರ ಕೋರಿದ್ದರು.
ಆಯೋಗವು ಎಲ್ಲ ಅಂಶಗಳನ್ನು ಪರಿಶೀಲಿಸಿ ಕಂಪನಿ ನೀಡಿರುವ ಕಾರಣ ಸೂಕ್ತವಲ್ಲ ಮತ್ತು ಸೇವಾನ್ಯೂನತೆ ಎಂದು ಪರಿಗಣಿಸಿ ವಿಮಾ ಕಂಪನಿಯು ವೇದಾವತಿ ಅವರಿಗೆ 15 ಲಕ್ಷ ರೂ. ಗಳ ವಿಮಾ ಪರಿಹಾರ ಮೊತ್ತವನ್ನು ವಾರ್ಷಿಕ ಶೇ.9ರ ಬಡ್ಡಿಯೊಂದಿಗೆ ಪಾವತಿಸಬೇಕು ಮತ್ತು ಪಿರ್ಯಾದುದಾರರಿಗೆ ಉಂಟಾದ ಮಾನಸಿಕ ಹಾನಿಗೆ 40 ಸಾವಿರ ರೂ. ಪರಿಹಾರ ಪಾವತಿಸಬೇಕು ಹಾಗೂ ನ್ಯಾಯಾಲಯದ ಖರ್ಚು ವೆಚ್ಚಗಳನ್ನು ಆದೇಶವಾದ 45 ದಿನದೊಳಗೆ ಪಾವತಿಸಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಅವರ ಪೀಠವು ಆದೇಶಿಸಿದೆ.