

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಳೆಗಾಲದಲ್ಲಿ ರಾಜಕಾಲುವೆ ಹಾಗೂ ನಾಲಾಗಳು ತುಂಬಿ ಜನರಿಗೆ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇದೆ. ಹೀಗಾಗಿ ಇನ್ನು 15 ದಿನಗಳಲ್ಲಿ ಹೂಳೆತ್ತುವ ಕೆಲಸ ಆಗಬೇಕಲ್ಲದೆ, ಒತ್ತುವರಿ ಸಹ ತೆರವು ಮಾಡುವಂತೆ ಮೇಯರ್ ಈರೇಶ ಅಂಚಟಗೇರಿ ಆದೇಶಿಸಿದರು.
ನಗರದ ಮಹಾನಗರ ಪಾಲಿಕೆ ಕಚೇರಿ ಸ್ವಾತಂತ್ರೃ ಅಮೃತ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಈ ಆದೇಶ ಹೊರಡಿಸಿದರು.
ಈಗಾಗಲೇ ನಾಲಾ, ಗಟಾರು ಸ್ವಚ್ಛತೆಗೆ ಪ್ರತಿ ವಾರ್ಡ್‌ಗೆ 5 ಲಕ್ಷ ರೂ. ನೀಡಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ 5 ಲಕ್ಷ ರೂ. ಸೇರಿಸಿ ಒಟ್ಟು 10 ಲಕ್ಷ ರೂ. ನೀಡಲಾಗುವುದು. ಮುಂಗಾರು ಆರಂಭಕ್ಕೂ ಮುನ್ನ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಆಯಾ ವಲಯ ಕಚೇರಿ ಸಹಾಯಕ ಆಯುಕ್ತರೇ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಸಿದರು.
ಇದಕ್ಕೂ ಪೂರ್ವದಲ್ಲಿ ನಡೆದ ಚರ್ಚೆಯಲ್ಲಿ ವೀರಣ್ಣ ಸವಡಿ, ರಾಜಣ್ಣ ಕೊರವಿ, ಕವಿತಾ ಕಬ್ಬೇರ, ಚಂದ್ರಶೇಖರ ಮನಗುಂಡಿ ಹಾಗೂ ಇತರ ಸದಸ್ಯರು ಮಾತನಾಡಿ, ಕಳೆದ ವಾರ ಸುರಿದ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿವೆ. ಹೀಗಾಗಿ ಮಳೆಗಾಲ ಆರಂಭಕ್ಕೂ ಪೂರ್ವ ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿದರು.
ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಮಾತನಾಡಿ, ಮಳೆಹಾನಿ ತಡೆಗೆ ಈಗಾಗಲೇ ಕಾರ್ಯಪಡೆ ರಚಿಸಲಾಗಿದೆ. ನಾಲಾ ಹೂಳೆತ್ತಲು ಪ್ರತಿ ವಲಯಕ್ಕೆ 5 ಲಕ್ಷ ರೂ., ಸಣ್ಣ ನಾಲಾ ಹೂಳೆತ್ತಲು 1 ಲಕ್ಷ ರೂ. ನೀಡಲಾಗಿದೆ. ಸದ್ಯ ಅವಳಿನಗರದಲ್ಲಿ 14 ಜಟ್ಟಿಂಗ್ ಮತ್ತು 5 ಸಿಲ್ಟಿಂಗ್ ವಾಹನಗಳಿವೆ. 2 ಜಟ್ಟಿಂಗ್ ಹಾಗೂ 3 ಸಿಲ್ಟಿಂಗ್ ವಾಹನಗಳು ಬರಲಿವೆ. ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಭರವಸೆ ನೀಡಿದರು.
ಹುಬ್ಬಳ್ಳಿಯಲ್ಲಿ ಪಾಲಿಕೆ ಒಡೆತನದಲ್ಲಿರುವ ಬ್ರಾಡ್ವೇ ಕಟ್ಟಡದ ನಿವೇಶನದಲ್ಲಿ ಪಿಪಿಪಿ ಮಾದರಿಯಲ್ಲಿ ಸುಸಜ್ಜಿತ ವಾಣಿಜ್ಯ ಮಳಿಗೆ ನಿರ್ಮಿಸಲು ಸಭೆ ಒಪ್ಪಿತು. ಸದಸ್ಯ ವೀರಣ್ಣ ಸವಡಿ ಮಾತನಾಡಿ, ಈ ನಿವೇಶನದಲ್ಲೇ ಸರ್ಕಾರಿ ಶಾಲೆ ಇದೆ. ಆ ಶಾಲೆ ಕಟ್ಟಡದ ಬಗ್ಗೆ ಸಹ ಗಮನಿಸಬೇಕು. ಅದು ಯೋಗ್ಯವಾಗಿಲ್ಲದಿದ್ದರೆ ಮರು ನಿರ್ಮಾಣ ಮಾಡಲು ಚಿಂತಿಸಬೇಕು ಎಂದರು. ಇದಕ್ಕೆ ಧನಿ ಗೂಡಿಸಿದ ಇನ್ನಿತರ ಸದಸ್ಯರು, ಬರೀ ಮಳಿಗೆ ನಿರ್ಮಾಣ ಮಾಡಿದರೆ ಸಾಲದು. ಎಲ್ಲ ಮೂಲ ಸೌಲಭ್ಯ ನೀಡಬೇಕು ಎಂದು ಸಲಹೆ ನೀಡಿದರು.
ನಾಗರಿಕ ಸಮಿತಿ ಕಾರ್ಯರೂಪಕ್ಕೆ: ನಾಗರಿಕ ಸಮಿತಿ ರಚನೆಗೆ ನೇಮಿಸಿದ್ದ ಸದನ ಸಮಿತಿ ನೀಡಿದ ವರದಿ ಆಧರಿಸಿ ಆ. 15ರೊಳಗೆ ನಾಗರಿಕ ಸಮಿತಿ ರಚಿಸಲು ಮೇಯರ್ ಆದೇಶಿಸಿದ್ದಾರೆ. ರಾಮಣ್ಣ ಬಡಿಗೇರ ನೇತೃತ್ವದ ಸದನ ಸಮಿತಿಯು ವರದಿ ಮಂಡಿಸುತ್ತಿದ್ದಂತೆ ವಾರ್ಡ್ ಸಮಿತಿ ಸದಸ್ಯರ ನಡತೆ ಬಗ್ಗೆ ಕೆಲವರು ಅಪಸ್ವರ ಎತ್ತಿತ್ತದರು. ಸಮಿತಿ ಸದಸ್ಯರು ಯಾವ ರೀತಿ ಇರಬೇಕು ಎಂಬ ನಿಯಮ ಇರಲಿ ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮೇಯರ್, ವಾರ್ಡ್‌ನ ನಾಗರಿಕ ಸಮಿತಿಗಳ ಕಾರ್ಯವೈಖರಿ ಸಲಹಾರೂಪಕ್ಕೆ ಸಿಮೀತವಾಗಿರಬೇಕು. ಈ ವಿಚಾರದಲ್ಲಿ ಪಾಲಿಕೆ ಸದಸ್ಯರು ನೀಡಿದ ಸಲಹೆಗಳನ್ನು ಒಳಗೊಂಡು ಆ. 15ರೊಳಗೆ ಸಮಿತಿ ರಚಿಸುವಂತೆ ಆದೇಶಿಸಿದರು.