

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ರಸ್ತೆಗುಂಡಿ ಮುಚ್ಚುವ ಸಮಗ್ರ ಕಾರ್ಯಾಚರಣೆ, ಮೇಲ್ವಿಚಾರಣೆ ಮತ್ತು ಅನುಷ್ಠಾನಕ್ಕಾಗಿ 7 ಮಂದಿ ಅಧಿಕಾರಿಗಳನ್ನು ಒಳಗೊಂಡಿರುವ ವಲಯವಾರು ಕಾರ್ಯಪಡೆ ರಚಿಸಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೋಮವಾರ ಆದೇಶಿಸಿದ್ದಾರೆ.
ನಗರದಲ್ಲಿ ನಿರಂತರವಾಗಿ ಉಂಟಾಗುತ್ತಿರುವ ರಸ್ತೆಗುಂಡಿ ಸಮಸ್ಯೆಯಿಂದ ಶಾಶ್ವತ ಪರಿಹಾರ ಪಡೆಯಲು ಈ ಕಾರ್ಯಪಡೆಯಿಂದ ಸಾಧ್ಯವಾಗಲಿದೆ. ವಲಯವಾರು ಸಮಿತಿ ರಚಿಸಿರುವುದರಿಂದ ಸ್ಥಳೀಯವಾಗಿಯೇ ನಿರ್ಧಾರವನ್ನು ಕೈಗೊಂಡು ಎಲ್ಲೆಲ್ಲಿ ಗುಂಡಿಗಳು ಉಂಟಾಗಿವೆಯೋ ಅಂತಹ ರಸ್ತೆಗಳಲ್ಲಿ ಶೀಘ್ರದಲ್ಲೇ ಪರಿಹಾರ ಒದಗಿಸಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಟಿ ರೌಂಡ್ಸ್ ವೇಳೆ ಕಾರ್ಯಪಡೆ ರಚಿಸುವ ಭರವಸೆ ನೀಡಿದ್ದರು. ಅದೀಗ ಕಾರ್ಯರೂಪಕ್ಕೆ ಬಂದಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 12,878 ಕಿ.ಮೀ. ಉದ್ದದ ರಸ್ತೆ ಜಾಲವಿದೆ. ಈ ಪೈಕಿ 1,344.84 ಕಿ.ಮೀ. ಉದ್ದದ ರಸ್ತೆಗಳನ್ನು ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳೆಂದು ಪರಿಗಣಿಸಿದ್ದು, ರಸ್ತೆ ಮೂಲಸೌಕರ್ಯ ಶಾಖೆಯಿಂದ ನಿರ್ವಹಿಸಲಾಗುತ್ತಿದೆ. ಉಳಿದ 11,533.16 ಕಿ.ಮೀ. ರಸ್ತೆಗಳನ್ನು ವಲಯ ಮಟ್ಟದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ.
ಸಮಿತಿಯಲ್ಲಿ ಪೊಲೀಸ್‌ಗೂ ಸ್ಥಾನ:
ವಲಯವಾರು ಟಾಸ್‌ಕೆೆರ್ಸ್‌ಅನ್ನು ಆಯಾ ವಲಯದ ಆಯುಕ್ತರು ಅಧ್ಯಕ್ಷರಾಗಿರುತ್ತಾರೆ. ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಸೇರಿ ಐವರು ಸದಸ್ಯರಿದ್ದು, ವಲಯ ಸಹಾಯಕ ಸಂಚಾರ ಪೊಲೀಸ್ ಆಯುಕ್ತರಿಗೂ ಸ್ಥಾನ ಕಲ್ಪಿಸಲಾಗಿದೆ. ವಲಯದ ಸಹಾಯಕ ಉಪ ನಿಯಂತ್ರಕರು (ಹಣಕಾಸು) ಸದಸ್ಯರ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಕಾರ್ಯಪಡೆ ಸಮಿತಿಯಲ್ಲಿರುವವರು:
ವಲಯ ಆಯುಕ್ತರು - ಅಧ್ಯಕ್ಷ
ವಲಯ ಜಂಟಿ ಆಯುಕ್ತರು - ಸದಸ್ಯ
ವಲಯ ಮುಖ್ಯ ಅಭಿಯಂತರರು - ಸದಸ್ಯ
ವಲಯ ಸಹಾಯಕ ಸಂಚಾರ ಪೊಲೀಸ್ ಆಯುಕ್ತರು - ಸದಸ್ಯ
ವಲಯದ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ - ಸದಸ್ಯ
ವಲಯ ವ್ಯಾಪ್ತಿಗೆ ಬರುವ ಸಂಬಂಧಪಟ್ಟ ವಿಭಾಗದ ಕಾರ್ಯಪಾಲಕ ಅಭಿಯಂತರ - ಸದಸ್ಯ
ವಲಯ ಆಯುಕ್ತರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಉಪ ನಿಯಂತ್ರಕರು (ಹಣಕಾಸು) - ಸದಸ್ಯ ಕಾರ್ಯದರ್ಶಿ.
ಆರ್ಟಿರಿಯಲ್/ಸಬ್ ಆರ್ಟಿರಿಯಲ್ ರಸ್ತೆಗಳ ವಿವರ:
ವಲಯದ ಹೆಸರು ರಸ್ತೆ ಉದ್ದ
ಪೂರ್ವ 1,694.93 ಕಿ.ಮೀ.
ಪಶ್ಚಿಮ 1,424.24 ಕಿ.ಮೀ.
ದಕ್ಷಿಣ 1,528.70 ಕಿ.ಮೀ.
ಮಹದೇವಪುರ 1,896.84 ಕಿ.ಮೀ.
ಬೊಮ್ಮನಹಳ್ಳಿ 1,775.67 ಕಿ.ಮೀ.
ಯಲಹಂಕ 1,528.38 ಕಿ.ಮೀ.
ಆರ್.ಆರ್.ನಗರ 2,072.69 ಕಿ.ಮೀ.
ದಾಸರಹಳ್ಳಿ 607.53 ಕಿ.ಮೀ.
ರಸ್ತೆ ಮೂಲಸೌಕರ್ಯ ವಿಭಾಗ 1,344.84 ಕಿ.ಮೀ.