

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಸರ್ಕಾರದ ಕಟ್ಟಡಗಳು ಹಾಗೂ ಸಾರ್ವಜನಿಕ ಉದ್ದಿಮೆಗಳಳು ಬಾಕಿ ಉಳಿಸಿಕೊಂಡಿರುವ ಆಸ್ತಿತೆರಿಗೆ ಬಾಕಿಯನ್ನು ಒಂದು ಬಾರಿಯ ಪರಿಹಾರ ಯೋಜನೆ (ಓಟಿಎಸ್) ಅಡಿಯಲ್ಲಿ ಮಾ.31 ರೊಳಗೆ ಪಾವತಿಸಲು ಕಾಲಾವಕಾಶ ನೀಡಲಾಗಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಮುಖ್ಯ ಆಯುಕ್ತರು ತುಷಾರ್ ಗಿರಿನಾಥ್, ಈಗಾಗಲೇ ಒಟಿಎಸ್ ಅವಧಿ ಪೂರ್ಣಗೊಂಡಿದೆ. ಆದರೂ, ಅಂತಿಮ ಅವಕಾಶದಡಿ ಶೂನ್ಯ ಬಡ್ಡಿ ಹಾಗೂ 100 ರೂ. ದಂಡ ಶುಲ್ಕ ಪಾವತಿಸಿ ಬಾಕಿ ಪಾವತಿಸಬೇಕಾಗುತ್ತದೆ. ಈ ಸಂಬಂಧ ವಲಯದ ಅಧಿಕಾರಿಗಳು ಆಯಾ ಸಂಸ್ಥೆಗಳಿಗೆ ಪತ್ರ ಬರೆದು ಬಾಕಿ ಕಟ್ಟಲು ವಿನಂತಿಸಿಕೊಳ್ಳಲಿದೆ ಎಂದರು.
ಸಾರ್ವಜನಿಕರಿಗೂ ಈ ಸೌಲಭ್ಯವು ಮಾ.31ರವರೆಗೆ ಅನ್ವಯವಾಗಲಿದೆ. ಒಂದು ವೇಳೆ ಆಸ್ತಿ ಮಾಲೀಕರು ಗಡುವಿನೊಳಗೆ ತೆರಿಗೆ ಪಾವತಿಸದಿದ್ದಲ್ಲಿ ಏ.1ರಿಂದ ಶೇ.100 ದಂಡ ಪಾವತಿಸಬೇಕಾಗುತ್ತದೆ. ಈ ಮಾಹಿತಿಯನ್ನು ಪಾಲಿಕೆ ಹಲವು ಬಾರಿ ಹೇಳಿದ್ದರೂ, ಇನ್ನೂ 1.82 ಲಕ್ಷ ಸ್ವತ್ತುದಾರರು ಉದಾಸೀನ ಮಾಡುತ್ತಿದ್ದಾರೆ. ಅಂತಹವರಿಗೆ ದಂಡ ಹಾಕುವ ಜತೆಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.