

ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನದ ನಂತರ ಮಳೆ ಬಿರುಸು ಪಡೆದಿದೆ. ಭಾರತೀಯ ಹವಾಮಾನ ಇಲಾಖೆ ಜು.26ರಂದು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಈ ನಡುವೆ ಘಟ್ಟ ಪ್ರದೇಶಗಳಾದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿದೆ.
ದ.ಕ.ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ವರೆಗೆ ಅಲ್ಲಲ್ಲಿ ಮಳೆಯಾಗಿದೆ. ಮಂಗಳೂರಿನಲ್ಲಿ ಮೋಡ, ಆಗಾಗ ತುಂತುರು ಮಳೆಯಾಗಿತ್ತು. ಆದರೆ ಅಪರಾಹ್ನ ಜಿಲ್ಲೆಯಾದ್ಯಂತ ಬಿರುಸಿನ ಮಳೆ ಕಾಣಿಸಿದೆ. ಗ್ರಾಮೀಣ ಭಾಗಗಳಲ್ಲಿ ಗಾಳಿ ಸಹಿತ ಮಳೆ ಕಂಡುಬಂದಿತ್ತು.
*ಅಲ್ಲಲ್ಲಿ ಮಳೆ ಹಾನಿ
ಚಿಲಿಂಬಿಯಲ್ಲಿ ಬುಧವಾರ ರಾತ್ರಿ ಕಟ್ಟಡವೊಂದರ ಮೇಲಿದ್ದ ಕಬ್ಬಿಣದ ಶೀಟ್ ಹಾಗೂ ರಾಡ್ ಬಿದ್ದು ನೀರಿನ ಟ್ಯಾಂಕ್ ಮತ್ತು ಕಾಂಕ್ರಿಟ್ ಮನೆ ಫೈಬರ್ ಶೀಟ್ ಸಂಪೂರ್ಣ ಹಾನಿಗೊಳಗಾಗಿದೆ. ಈ ವೇಳೆ ಸಿಸ್ಟರ್ ಲೂಸಿ ಡಿಸೋಜಾ ಸೇರಿದಂತೆ ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 25 ಸಾವಿರ ರು. ನಷ್ಟ ಅಂದಾಜಿಸಲಾಗಿದೆ. ಚಿಲಿಂಬಿಯಲ್ಲಿ ಭಾರಿ ಗಾಳಿಗೆ ಶೀಟ್ ಹಾಗೂ ಕಬ್ಬಿಣದ ರಾಡ್ ಬಿದ್ದು ಆಟೋರಿಕ್ಷಾ, ದ್ವಿಚಕ್ರ ವಾಹನ ಜಖಂಗೊಂಡ ಘಟನೆಯೂ ಅಲ್ಲೇ ಸಮೀಪ ಸಂಭವಿಸಿದೆ. ಮೂಡುಶೆಡ್ಡೆ ಶಿವನಗರ ನಿವಾಸಿ ಪಂಚಾಯಿತಿ ಸದಸ್ಯೆ ಕರಿಷ್ಮ ಅವರ ಮನೆ ಗಾಳಿ ಮಳೆಗೆ ಕುಸಿದು ಸಂಪೂರ್ಣ ಹಾನಿಯಾಗಿದೆ. ಜೋಕಟ್ಟೆ ಸಮೀಪ ತಡೆಗೋಡೆ ಮನೆ ಮೇಲೆ ಕುಸಿದು 17 ವರ್ಷದ ಬಾಲಕ ಸಾವಿಗೀಡಾದ ಬಗ್ಗೆ ವರದಿಯಾಗಿದೆ.
ಬೆಳ್ತಂಗಡಿ ಗರಿಷ್ಠ ಮಳೆ:
ದ.ಕ.ಜಿಲ್ಲೆಯ ಗುರುವಾರ ಬೆಳಗ್ಗಿನ ವರೆಗೆ ಬೆಳ್ತಂಗಡಿಯಲ್ಲಿ ಗರಿಷ್ಠ 88.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 62.1 ಮಿ.ಮೀ. ಆಗಿದೆ. ಬಂಟ್ವಾಳ 55.1 ಮಿ.ಮೀ, ಮಂಗಳೂರು 55.4 ಮಿ.ಮೀ, ಪುತ್ತೂರು 39.1 ಮಿ.ಮೀ, ಸುಳ್ಯ 37.5 ಮಿ.ಮೀ, ಮೂಡುಬಿದಿರೆ 63.4 ಮಿ.ಮೀ, ಕಡಬ 69.3 ಮಿ.ಮೀ, ಮೂಲ್ಕಿ 36.5 ಮಿ.ಮೀ, ಉಳ್ಳಾಲ 34.4 ಮಿ.ಮೀ. ಮಳೆಯಾಗಿದೆ. ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ 28.5 ಮೀಟರ್, ಬಂಟ್ವಾಳದಲ್ಲಿ ನೇತ್ರಾವತಿ ನದಿ 7.1 ಮೀಟರ್ನಲ್ಲಿ ಹರಿಯುತ್ತಿದೆ.
------------------
ನದಿಯಲ್ಲಿ ನೀರಿನ ಪ್ರವಾಹ ಏರಿಕೆ
ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನೇತ್ರಾವತಿ ಮತ್ತು ಕುಮಾರಧಾರ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಬುಧವಾಋ ರಾತ್ರಿ ಪಶ್ಚಿಮಘಟ್ಟದ ಅರಣ್ಯ ವ್ಯಾಪ್ತಿಯ ಚಾರ್ಮಾಡಿ, ಮಲೆಮನೆ ಬೆಟ್ಟ, ದೊಡ್ಡೇರಿ ಬೆಟ್ಟ, ರಾಮನಗುಡ್ಡ, ಹೊಸಮನೆಗುಡ್ಡ, ಹೊಸಮನೆ ಗುಡ್ಡ ಪ್ರದೇಶಗಳಲ್ಲಿ, ಬಳ್ಳಾಲರಾಯನ ದುರ್ಗ, ಮಿಂಚಳ್ಳಿ, ಎರ್ಮಾಯಿ ಬೆಟ್ಟ, ಚಾರ್ಮಾಡಿ ಘಾಟ್ ಪ್ರದೇಶದ ಏರಿಕಲ್ಲು, ಕೊಡೆಕಲ್ಲು, ಮಿಂಚುಕಲ್ಲು, ಬಾರೆಕಲ್ಲು ಬೆಟ್ಟಗಳಲ್ಲಿ ನಿರಂತರ ಮಳೆಯಾಗಿದ್ದು, ಮತ್ತೆ ನೇತ್ರಾವತಿ ನದಿನೀರಿನ ಮಟ್ಟ ಹೆಚ್ಚಳವಾಗಿದೆ.