ಬಾಯಿಯ ಆರೋಗ್ಯ ಸಂರಕ್ಷಣೆ ಅಗತ್ಯ

mysore
Published on

ಮೈಸೂರು: ಬಾಯಿಯ ಆರೋಗ್ಯ ನಿಮ್ಮ ಇತರ ಸಾಮಾನ್ಯ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯಕರ ಕ್ರಮ ಅನುಸರಿಸಬೇಕು ಎಂದು ಬೆಂಗಳೂರಿನ ತತ್ವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರವಿಂದ ವರ್ಚಸ್ವಿ ಹೇಳಿದರು.

ಜೆಎಸ್‌ಎಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಜೆಎಸ್‌ಎಸ್ ದಂತ ಕಾಲೇಜು, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಹಯೋಗದಲ್ಲಿ ನಗರದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಆಯುರ್‌ಡೆಂಟೊಕಾನ್-2024’ ದಂತ ಮತ್ತು ಬಾಯಿ ಆರೋಗ್ಯದ ಸಮ್ಮೇಳನದಲ್ಲಿ ಮಾತನಾಡಿದರು.

ಬ್ಯಾಕ್ಟೀರಿಯಾಗಳ ಸೋಂಕಿನಿಂದ ನಿಮ್ಮ ಬಾಯಿಯಲ್ಲಿ ವಸಡಿನ ರೋಗ ಉಂಟಾಗಬಹುದು. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಇದು ರಕ್ತದ ಮೂಲಕ ದೇಹದ ಇತರ ಭಾಗಗಳಿಗೆ ಹಾನಿ ಉಂಟು ಮಾಡಬಹುದು. ಸಾಮಾನ್ಯವಾಗಿ ಯಾವುದೇ ಕಾಯಿಲೆಗಳ ಲಕ್ಷಣಗಳು ಕಂಡುಬಂದು ಆಸ್ಪತ್ರೆಗೆ ತೆರಳಿದಾಗ ವೈದ್ಯರು ಮೊದಲು ಬಾಯಿಯನ್ನು ಪರಿಶೀಲಿಸುವರು.

ಹಲ್ಲುಗಳು, ನಾಲಿಗೆ, ಗಂಟಲು ಸೇರಿದಂತೆ ಬಾಯಿಯ ಆರೋಗ್ಯದಲ್ಲಿ ಏರುಪೇರಾದಾಗ ಅದರ ಪರಿಣಾಮ ದೇಹದ ಇತರ ಭಾಗಗಳಿಗೆ ಕೂಡ ಆಗುತ್ತದೆ. ಆದ್ದರಿಂದ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.

ಪಥ್ಯಾಹಾರ ಸೇವನೆ ಬಾಯಿ ಆರೋಗ್ಯ ಮಾತ್ರವಲ್ಲದೆ ದೇಹಾರೋಗ್ಯದಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಬಹುತೇಕ ಜನರಲ್ಲಿ ವಸಡಿನ ತೊಂದರೆ ಸಾಮಾನ್ಯವಾಗಿರುತ್ತದೆ. ವಸಡುಗಳ ಸಂದಿಯಲ್ಲಿನ ಸೂಕ್ಷ್ಮಕೊಳೆಯನ್ನು ತೆಗೆಯುವ ಮೂಲಕ ವಸಡಿನ ಸಮಸ್ಯೆ ದೂರವಾಗಿಸಿಕೊಳ್ಳಬಹುದು. ಸರಿಯಾದ ಬಾಯಿ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಬಾಯಿಯ ಕ್ಯಾನ್ಸರ್ ಸೇರಿದಂತೆ ಇತರ ಸಮಸ್ಯೆಯನ್ನೂ ನಿಗ್ರಹಿಸಲು ನೆರವಾಗುತ್ತದೆ ಎಂದರು.

ಜೆಎಸ್‌ಎಸ್ ದಂತ ಕಾಲೇಜಿನ ಪ್ರಾಂಶುಪಾಲೆ ಎಂ.ಆರ್.ದಾಕ್ಷಾಯಿಣಿ, ಜೆಎಸ್‌ಎಸ್ ಎಎಚ್‌ಇಆರ್ ಕುಲಸಚಿವ ಡಾ.ಬಿ.ಮಂಜುನಾಥ್, ಮೈಸೂರಿನ ಜೆಎಸ್‌ಎಸ್ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ಸಾರ್‌ಬೇಶ್ವರ್‌ಕಾರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net