

ತೀರ್ಥಹಳ್ಳಿ: ಆರ್ಥಿಕವಾಗಿ ಹಿಂದುಳಿದವರ ಬದುಕಿನಲ್ಲಿ ಭರವಸೆ ಮೂಡಿಸಿರುವ ಸಹಕಾರ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಸ್ಥೆಗಳಿಂದ ಜಾತ್ಯಾತೀತ ನೆಲೆಯಲ್ಲಿ ಸಮಾಜಮುಖಿ ಕಾರ್ಯಗಳು ನಡೆಯಬೇಕಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಪಟ್ಟಣದ ತುಳುನಾಡು ಸಿರಿ ಸೌಹಾರ್ಧ ಸಹಕಾರ ಸಂಘದ ಸರ್ವಸದಸ್ಯರ ಸಭೆಯ ಅಂಗವಾಗಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ನೆರವಿನೊಂದಿಗೆ ಮಂಗಳವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಈ ದೇಶದ ಭವಿಷ್ಯ ಜಾತ್ಯಾತೀತ ಧೋರಣೆಯ ನೆಲೆಗಟ್ಟಿನ ಮೇಲೆ ನಿಂತಿದೆ. ಬಡವರ ಬದುಕಿನಲ್ಲಿ ಆಶಾಭಾವನೆಯನ್ನು ಮೂಡಿಸಿರುವ ಸಹಕಾರ ಸಂಸ್ಥೆಯಿಂದ ಕೈಗೊಂಡಿರುವ ಆರೋಗ್ಯ ಶಿಬಿರದ ಸೌಲಭ್ಯ ಪ್ರಶಂಸನೀಯ. ಅತೀ ಕಡಿಮೆ ಅವಧಿಯಲ್ಲಿ ಸಂಸ್ಥೆ ಗಮನಾರ್ಹ ಬೆಳವಣಿಗೆ ಕಂಡಿದೆ ಎಂದರು.
ಸಂಘದ ಅಧ್ಯಕ್ಷ ಬಿ.ಆರ್.ರಾಘವೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ಸಹ್ಯಾದ್ರಿ ಸಮೂಹ ಸಂಸ್ಥೆಯ ಅಧ್ಯಕ್ಷ ಎಚ್.ಎನ್.ವಿಜಯದೇವ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಸಹಕಾರ ಮುಖಂಡ ಕೆ.ನಾಗರಾಜ ಶೆಟ್ಟಿ, ಪಪಂ ಮಾಜಿ ಅಧ್ಯಕ್ಷೆ ಸುಶೀಲಾ ಶೆಟ್ಟಿ ಇತರರಿದ್ದರು.