

ಶಿವಮೊಗ್ಗ: ಸರ್ಕಾರಿ ನೌಕರರಿಗೆ ಎನ್‌ಪಿಎಸ್ ಬದಲು ಒಪಿಎಸ್ ಜಾರಿ ಮಾಡುವುದಾಗಿ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೇವು. ಆ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪಿಎಸ್ ಜಾರಿಗೆ ಉತ್ಸುಕರಾಗಿದ್ದು, ಶೀಘ್ರದಲ್ಲೇ ಸರ್ಕಾರ ಒಪಿಎಸ್ ಜಾರಿಗೊಳಿಸಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಬಲೂನ್ ಹಾರಿಸುವ ಚಾಲನೆ ನೀಡಿ ಮಾತನಾಡಿದ ಅವರು, 2006ರ ಬಳಿಕ ನೇಮಕಗೊಂಡ ಸರ್ಕಾರಿ ನೌಕರರಿಗೆ ಒಪಿಎಸ್ ಜಾರಿಗೊಳಿಸುವುದು ಖಚಿತ ಎಂದು ಪುನರುಚ್ಚರಿಸಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪ್ರಣಾಳಿಕೆ ಉಪಾಧ್ಯಕ್ಷನಾಗಿದ್ದು, ಒಪಿಎಸ್ ಜಾರಿಗೊಳಿಸುವ ಬಗ್ಗೆ ಭರವಸೆ ನೀಡಿದ್ದೇವು. ಸರ್ಕಾರಿ ನೌಕರರು ಸರ್ಕಾರವೇ ಆಗಿದ್ದಾರೆ. ಅವರ ಕುಟುಂಬದವರು ನೆಮ್ಮದಿಯಿಂದ ಇರುಬೇಕು ಎಂಬುದು ಸರ್ಕಾರದ ಅಭಿಲಾಶೆ ಆಗಿದೆ. ಆ ನಿಟ್ಟಿನಲ್ಲಿ ಒಪಿಎಸ್ ಜಾರಿಗೊಳಿಸುವ ಬಗ್ಗೆ ಸಿಎಂ ಕೂಡ ಚಿಂತನೆ ನಡೆಸಿದ್ದಾರೆ ಎಂದರು.
ಮೂರುದಿನಗಳ ಕ್ರೀಡಾಕೂಟ ನೌಕರರಿಗೆ ಹಬ್ಬದ ವಾತಾವರಣ ನಿರ್ಮಿಸುತ್ತದೆ. ವರ್ಷವಿಡಿ ಕಚೇರಿಯಲ್ಪಿ ಕೆಲಸ ಮಾಡಿ ದಣಿದವರಿಗೆ ಈ ಕ್ರೀಡಾಕೂಟ ಮಾನಸಿಕ ನೆಮ್ಮದಿಯ ತಾಣವಾಗುತ್ತದೆ. 15ರಿಂದ 20 ಸಾವಿರ ನೌಕರರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು ಮಲೆನಾಡಿನ ಈ ಭಾಗದಲ್ಲಿ ಆಯೋಜನೆಗೊಂಡಿರುವ ಮೂರು ದಿನಗಳ ಕ್ರೀಡಾ ಉತ್ಸವದ ಪ್ರಯೋಜನವನ್ನು ಎಲ್ಲ ಸರ್ಕಾರಿ ನೌಕರರು ಪಡೆಯಬೇಕು ಎಂದರು.
ಕ್ರೀಡಾಕೂಟದ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಬರಬೇಕಿತ್ತು. ಆದರೆ ಹವಾಮಾನ ವೈಪರಿತ್ಯ ಕಾರಣದಿಂದ ಅವರ ಪ್ರವಾರ ರದ್ದಾಗಿದೆ. 6 ಮತ್ತು 7ನೇ ವೇತನ ಆಯೋಗವನ್ನು ಸಿದ್ದರಾಮಯ್ಯ ಅವರೇ ಜಾರಿಗಳಿಸಿದ್ದು, ಸರ್ಕಾರಿ ನೌಕರರ ಜತೆ ಸಿಎಂ ಸದಾ ನಿಂತಿದ್ದಾರೆ. ಅವರ ಎಲ್ಲ ಕಾರ್ಯಗಳಿಗೂ ಬೆನ್ನೆಲುಬಾಗಿದ್ದಾರೆ. ಹಾಗಾಗಿ ಕ್ರೀಡಾಕೂಟ ಮೂರು ದಿನ ನಡೆಯಲಿದ್ದು ಭಾಗವಹಿಸುವ ಸಾಧ್ಯತೆಯೂ ಇದೆ ಎಂದರು.