

ವಿಜಯಪುರ: ಸರ್ಕಾರಿ ನೌಕರರಿಗೆ ಮಾರಕವಾಗಿ ಪರಿಣಮಿಸಿರುವ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಯಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಶ್ರಮಿಸಲಿದೆ ಎಂಬ ವಿಶ್ವಾಸ ಇರುವುದಾಗಿ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಎನ್‌ಪಿಎಸ್ ರದ್ದತಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಭಾರತ ಯಾತ್ರೆ ಸಮಾವೇಶದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಹಳೆಯ ಪಿಂಚಣಿ ಯೋಜನೆ ಜಾರಿಯಾಗುವವರೆಗೂ ತಾವು ವಿರಮಿಸುವುದಿಲ್ಲ ಎಂದರು.
ಸರ್ಕಾರ ಐದು ಗ್ಯಾರಂಟಿಗಳನ್ನು ನೀಡಿದೆ ಆರನೇ ಗ್ಯಾರಂಟಿ ಎನ್‌ಪಿಎಸ್ ರದ್ದು ಮಾಡಿ ಒಪಿಎಸ್ ಜಾರಿಗೆ ತರಲಿದೆ. ಅದನ್ನು ಜಾರಿಯಾಗುವವರೆಗೂ ಹೋರಾಟ ನಿರಂತರವಾಗಲಿದೆ. ಇದರ ಜೊತೆಯಲ್ಲಿ ಏಳನೇ ವೇತನ ಆಯೋಗದ ಮೇಲೆ ಒತ್ತಡ ತಂದು ಒಂದು ದೇಶ ಒಂದೇ ವೇತನ ಎಂಬ ನಿಯಮದಂತೆ ಸಮಾನ ವೇತನಕ್ಕಾಗಿ ಪ್ರಯತ್ನಿಸಲಾಗುತ್ತಿದೆ ಎಂದರು.
ಶಿಕ್ಷಣ ಹಾಗೂ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ. 5 ರಂದು ನವದೆಹಲಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಒಟ್ಟು ನಾಲ್ಕು ಹಂತದಲ್ಲಿ ಯಾತ್ರೆ ನಡೆಯಲಿದ್ದು, ಈಗಾಗಲೇ ಸೆ. 5 ರಿಂದ ಮೊದಲ ಹಂತದ ಭಾರತ ಯಾತ್ರೆ ಆರಂಭಗೊಂಡಿದೆ. ಕನ್ಯಾಕುಮಾರಿ, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಮುಖಾಂತರ ಸಂಚರಿಸಿ ಅ. 5 ರಂದು ನವದೆಹಲಿ ತಲುಪಲಿದೆ ಎಂದರು.
ಎರಡನೇ ಯಾತ್ರೆ ಅಸ್ಸಾಂದ ಗುವಾಹಟಿಯಿಂದ ಆರಂಭವಾಗಿ ಅಸ್ಸಾಂ, ಪಶ್ಚಿಮ ಬಂಗಾಳ, ಒಡಿಸ್ಸಾ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶದ ಮುಖಾಂತರ ನವದೆಹಲಿ ತಲುಪಲಿದೆ. ಮೂರನೇ ಯಾತ್ರೆ ಗುಜರಾತದ ಸೋಮನಾಥಪುರದಿಂದ ಆರಂಭವಾಗಿ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಮುಖಾಂತರ ನವದೆಹಲಿ ತಲುಪಲಿದೆ. ನಾಲ್ಕನೇ ಯಾತ್ರೆ ಪಂಜಾಬ್ ರಾಜ್ಯದಿಂದ ಹೊರಟು ಜಮ್ಮುಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಉತ್ತರ ಪ್ರದೇಶ ಮುಖಾಂತರ ನವದೆಹಲಿ ತಲುಪಲಿದೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ಸೆ.17 ರಿಂದ 23ರವರೆಗೆ ಯಾತ್ರೆ ನಡೆಯಲಿದೆ. ಈ ಎಲ್ಲ ಯಾತ್ರೆಗಳು ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಮಾವೇಶಗೊಳ್ಳಲಿದ್ದು ಲಕ್ಷಾಂತರ ಜನ ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದೆಂದರು.
ಶಿಕ್ಷಕರ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಮಾತನಾಡಿ, ಹಳೆಯ ಪಿಂಚಣಿ ನಮ್ಮ ಭಿಕ್ಷೆಯಲ್ಲ ಅದು ನಮ್ಮ ಹಕ್ಕು. ಯಾವುದೇ ಕಾರಣಕ್ಕೂ ಹಿಂಜರಿಯದೆ ಪಡದೇ ತೀರುತ್ತೇವೆ. ರಾಜ್ಯ ಸರ್ಕಾರ ನಮ್ಮ ಪರವಾಗಿದೆ. ನೌಕರರ ಕೇಂದ್ರ ಸರ್ಕಾರದ ಬಳಿಯಿರುವ ಕರ್ನಾಟಕದ 2.5 ಲಕ್ಷ ಎನ್‌ಪಿಎಸ್ ನೌಕರರ ಪಿಂಚಣಿ ಹಣ 18ಸಾವಿರ ಕೋಟಿ ರೂ. ಮರಳಿ ನೀಡಲು ಒತ್ತಾಯಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಶಿಕ್ಷಕರ ಹತ್ತಾರು ಸಮಸ್ಯೆಗಳಿಗೆ ಶಿಕ್ಷಣ ಮಂತ್ರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಅಖಿಲ ಭಾರತ ಶಿಕ್ಷಕರ ಫೆಡರೇಶನ್ ರಾಷ್ಟ್ರೀಯ ಕೋಶಾಧ್ಯಕ್ಷ ಹರಗೋವಿಂದ, ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ರಾಷ್ಟ್ರೀಯ ಮಹಿಳಾ ಸಂಚಾಲಕಿ ಸೀಮಾ ಮಾಥೂರ, ಎನ್‌ಪಿಎಸ್ ರಾಷ್ಟ್ರೀಯ ಸಂಚಾಲಕಿ ರಮಾದೇವಿ, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ. ನಾಗೇಶ, ಜಿಲ್ಲಾಧ್ಯಕ್ಷ ಜಿ.ಎಸ್. ಬೇವನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ ಮಾತನಾಡಿದರು.
ಶಿಕ್ಷಕರ ಸಂಘದ ರಾಜ್ಯ ಕೋಶಾಧ್ಯಕ್ಷ ಸುರೇಶ ಶೆಡಶ್ಯಾಳ, ಎಂ.ಎಂ. ವಾಲೀಕಾರ, ಹಣಮಂತ ಕೊಣದಿ, ಚಂದ್ರೇಶಖರ ಜಿತ್ತಿ, ಅಲ್ಲಾಬಕ್ಸ್ ವಾಲೀಕಾರ, ಬಸವರಾಜ ಬೇವನೂರ, ಜುಬೇರ ಕೆರೂರ, ಟಿ.ಕೆ. ಜಂಬಗಿ, ಪುಷ್ಪಾ ಗಚ್ಚಿನಮಠ, ಜಿ.ಜಿ. ಕುಲಕರ್ಣಿ, ಮಲ್ಲನಗೌಡ ಹಡಲಗೇರಿ, ಉಮೇಶ ಗುಡ್ನಾಳ, ಆನಂದಗೌಡ ಬಿರಾದಾರ, ಅಶೋಕ ಚನಬಸಪ್ಪಗೋಳ, ಕಬೂಲ್ ಕೊಕಟನೂರ, ಪಿ.ಬಿ. ಚಾಂದಕವಟೆ, ಆನಂದ ಪವಾರ, ಮಲ್ಲಿಕಾರ್ಜುನ ಟಕ್ಕಳಕಿ, ಸಾಬು ಗಗನಮಾಲಿ, ಅಶೋಕ ಧಡಕೆ, ಅಶೋಕ ಬಜಂತ್ರಿ, ಬಿ.ಎಸ್. ಮಠ, ಝಡ್.ಐ. ಇಂಡಿಕರ, ಎಸ್.ವಿ. ಹರಳಯ್ಯ, ಎ.ಎಚ್. ವಾಲೀಕಾರ, ಬಿ.ಟಿ. ವಜ್ಜಲ, ಬಿ.ಎಚ್. ಮುದ್ನೂರ, ಬಿ.ಎಸ್. ಮುಕರ್ತಿಹಾಳ, ಎಸ್.ಎನ್. ಪಡಶೆಟ್ಟಿ, ಎ.ಎಸ್. ಸೊನ್ನಗಿ, ಐ.ಎಂ. ಬೇದ್ರೇಕರ ಮತ್ತಿತರರಿದ್ದರು.