

ಶಿವಮೊಗ್ಗ: ಒಪಿಎಸ್(ಹಳೇ ಪಿಂಚಣಿ ಯೋಜನೆ) ರದ್ದು ಮಾಡಿದ್ದೇ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್ ದೂರಿದರು.
ಒಪಿಎಸ್ ಸಮಸ್ಯೆಗೆ ಅಂದು ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಕಾರಣ. ಆಗ ಬಿ.ಎಸ್.ಯಡಿಯೂರಪ್ಪ ಅವರು ಡಿಸಿಎಂ ಆಗಿದ್ದರು. ಆದರೆ ಒಪಿಎಸ್ ರದ್ದು ಮಾಡಿದ್ದು ಕಾಂಗ್ರೆಸ್ ಎಂಬ ತಪ್ಪು ಗ್ರಹಿಕೆ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ತನ್ನ ಪ್ರಣಾಳಿಕೆಯಲ್ಲಿ ಹೊಸ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ ಒಪಿಎಸ್ ಜಾರಿಗೆ ತರುವುದಾಗಿ ಹೇಳಿದ್ದೇವೆ. ಹಾಗಾಗಿ ತಾವು ಆಯ್ಕೆಯಾದರೆ ಒಪಿಎಸ್ ಜಾರಿಗೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಕನಾಗಿ 17 ವರ್ಷ ಕೆಲಸ ಮಾಡಿದ ಅನುಭವವಿದೆ. 2012ರಲ್ಲಿ ಪಕ್ಷೇತರನಾಗಿ ಸ್ಪರ್ಧೆ ಮಾಡಿ ಕೇವಲ 170 ಮತಗಳ ಅಂತರದಲ್ಲಿ ಸೋತಿದ್ದೇನೆ. ಒಪಿಎಸ್ ಅನ್ನು ರದ್ದು ಮಾಡಿದ್ದ ಜೆಡಿಎಸ್‌ನ ಅಭ್ಯರ್ಥಿಗಳನ್ನು ಇದುವರೆಗೆ ಗೆಲ್ಲಿಸಿರುವುದು ಅತ್ಯಂತ ಬೇಸರದ ಸಂಗತಿ. ಹಾಗಾಗಿ ಈ ಬಾರಿ ಅದಕ್ಕೆ ಇತಿಶ್ರೀ ಹಾಡಬೇಕಿದೆ ಎಂದರು.
ಶಿಕ್ಷಕರ ಸಮಸ್ಯೆಗಳು ಸಾಕಷ್ಟಿವೆ. ಬಡ್ತಿ, ಗೌರವ, ಅತಿಥಿ, ಅರೆಕಾಲಿಕ, ತಾತ್ಕಾಲಿಕ ಶಿಕ್ಷಕರ, ಉಪನ್ಯಾಸಕರ ಸಮಸ್ಯೆಗಳು ಸಾಕಷ್ಟಿವೆ. ಸೇವಾ ಭದ್ರತೆ ಇಲ್ಲ. ಮಾಸಿಕ ವೇತನ ಹೆಚ್ಚಳ ಮಾಡಬೇಕು. ಅನುದಾನಿತರಿಗೂ ಪಿಂಚಣಿ ವ್ಯವಸ್ಥೆ ಜಾರಿಯಾಗಬೇಕು. ವಸತಿ ಶಾಲೆಗಳು ಹೆಚ್ಚಾಗಬೇಕು. ಆರೋಗ್ಯ ಸೇವೆ ಸಿಗಬೇಕು. ಪರೀಕ್ಷಾ ಸಮಸ್ಯೆ ಬಗೆಹರಿಯಬೇಕು. ಹೀಗೆ ಶಿಕ್ಷಕರ ಹಲವು ಸಮಸ್ಯೆಗಳಿದ್ದು ಅವುಗಳಿಗೆ ಶಾಶ್ವತವಾದ ಪರಿಹಾರ ಕಲ್ಪಿಸಬೇಕಿದೆ ಎಂದು ಎಂದರು.
ಮುಖಂಡರಾದ ಎಚ್.ಸಿ.ಯೋಗೀಶ್, ಕಲೀಂ ಪಾಷಾ, ವಿಶ್ವನಾಥ್ ಕಾಶಿ, ಶಿವಕುಮಾರ್, ಗಿರೀಶ್, ರಾಹುಲ್, ಅಕ್ರಂ ಸುದ್ದಿಗೋಷ್ಠಿಯಲ್ಲಿದ್ದರು.