

ಶಿವಮೊಗ್ಗ: ಅರಣ್ಯ ಇಲಾಖೆ ಅಧಿಕಾರಿಗಳು ಅವರದ್ದೇ ಆದ ಪ್ರತ್ಯೇಕ ಕಾನೂನು ಮಾಡಿಕೊಂಡು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಎಂಎಲ್‌ಸಿ ಡಿ.ಎಸ್.ಅರುಣ್ ದೂರಿದರು.
ಹೊಳೆಹೊನ್ನೂರು ರಸ್ತೆ ಶ್ರೀಗಂಧ ಕೋಠಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಶುಕ್ರವಾರ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ವಯನಾಡಲ್ಲಿ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗೆ ಅರ್ಧ ಗಂಟೆಯಲ್ಲಿ ಸಿಎಂ ಸಿದ್ದರಾಮಯ್ಯ 15 ಲಕ್ಷ ರೂ. ಘೋಷಣೆ ಮಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಸತ್ತ ರೈತರಿಗೆ ಕೇವಲ 2 ಲಕ್ಷ ರೂ. ಕೊಡುತ್ತಾರೆ. ಎಲ್ಲರಿಗೂ ಒಂದೇ ರೀತಿ ಇರಬೇಕು. ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು 15 ಲಕ್ಷ ರೂ. ಘೋಷಣೆ ಮಾಡುತ್ತಾರೆ. ಆನೆಗಳು ನಾಡಿಗೆ ಬರದಂತೆ ಟ್ರಂಚ್ ಹೊಡೆಯಬೇಕು. ಕಾಡಾನೆಗಳ ಸೆರೆಗೆ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಪ್ರತಿನಿತ್ಯ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡುತ್ತಿವೆ. ಹೊಸನಗರ ತಾಲೂಕಿನ ಬಸವಾಪುರ ರೈತ ತಿಮ್ಮಪ್ಪನ ಪ್ರಾಣವನ್ನು ಆನೆಗಳು ಬಲಿಪಡೆದಿವೆ. ಪ್ರತಿದಿನ ರೈತರು ಭಯದಿಂದ ಬದುಕುವಂತಾಗಿದೆ. ಜತೆಗೆ ಫಸಲಿಗೆ ಬಂದಿರುವ ಬೆಳೆಗಳನ್ನು ಕಾಡಾನೆಗಳಿಂದ ರಕ್ಷಣೆ ಮಾಡಿಕೊಳ್ಳುವುದು ಕಷ್ಟಕರವಾಗುತ್ತಿದೆ. ತಕ್ಷಣವೇ ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಬೇಕು. ಜತೆಗೆ ಬೆಳೆ ಹಾನಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.