ಚಿಕ್ಕ ಕೋಲಿಗದಲ್ಲಿ ಕಸ ವಿಲೇಗೆ ಗ್ರಾಮಸ್ಥರ ವಿರೋಧ ; ಹೊಸಕೋಟೆ ನಗರಸಭೆ ವಾಹನಗಳನ್ನು ತಡೆದು ಸಿಬ್ಬಂದಿಗೆ ತರಾಟೆ

28 Sulibele 0001
Published on

ಸೂಲಿಬೆಲೆ : ಚಿಕ್ಕಕೋಲಿಗ ಸಮೀಪದ ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಗೋಮಾಳದಲ್ಲಿ ಹೊಸಕೋಟೆ ನಗರಸಭೆ ಕಸ ವಿಲೇವಾರಿ ಮಾಡುತ್ತಿರುವುದಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗಿದೆ.

ನಗರಸಭೆಗೆ ಸಂಬಂಧಿಸಿದ ವಾಹನಗಳು ಶುಕ್ರವಾರ ರಾತ್ರಿ ಗ್ರಾಮದಲ್ಲಿ ಕಸ ವಿಲೇವಾರಿ ಮಾಡಲು ಬಂದಾಗ ತಡೆದ ಗ್ರಾಮಸ್ಥರು ಇಲ್ಲಿ ಕಸ ಹಾಕಲು ಯಾರು ಹೇಳಿದ್ದು, ಯಾರ ಅನುಮತಿ ಮೇರೆಗೆ ಕಸ ವಿಲೇವಾರಿ ಮಾಡುತ್ತಿದ್ದೀರಿ ಎಂದು ಚಾಲಕರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸುತ್ತಮುತ್ತ ಅರಣ್ಯ ಪ್ರದೇಶವಿದೆ, ಕಾಡು ಪ್ರಾಣಿಗಳ ಜೀವಕ್ಕೆ ಹಾನಿಯಾಗುವ ಜತೆಗೆ ಜನರ ಆರೋಗ್ಯದ ಮೇಲೂ ಇದರಿಂದ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾಗಿ ಈ ಜಾಗದಲ್ಲಿ ಕಸ ಹಾಕಬಾರದು ಎಂದು ತಾಕೀತು ಮಾಡಿದರು.

ತ್ಯಾಜ್ಯದಿಂದ ಕಲುಷಿತ ನೀರು ಸಂಗ್ರಹವಾಗಿ ಮನುಷ್ಯರೂ ಸೇರಿ ಜೀವ ಸಂಕುಲದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಈ ಪ್ರದೇಶದಲ್ಲಿ ರೇಷ್ಮೆ ಬೆಳೆಯಲು ಆಗುವುದಿಲ್ಲ, ಸುತ್ತಮುತ್ತಲಿನ ಗ್ರಾಮಸ್ಥರ ಒಪ್ಪಿಗೆ ಪಡೆಯದೆ ಈ ರೀತಿ ಮಾಡುವುದು ಸರಿಯಲ್ಲ ಎಂದು ಗ್ರಾಮಸ್ಥ ಆರ್. ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಪ್ರದೇಶದಲ್ಲಿ ಜಿಂಕೆ, ನವಿಲು, ಮೊಲ ಮುಂತಾದ ಪ್ರಾಣಿಗಳು ವಾಸಿಸುತ್ತವೆ. ತ್ಯಾಜ್ಯ ತಿನ್ನಲು ನಾಯಿಗಳು, ಕಾಡು ಪ್ರಾಣಿಗಳು ಬರುತ್ತವೆ. ಹಲವು ಬಾರಿ ಗಾರ್ಡ್‌ಗಳ ಗಮನಕ್ಕೆ ತರಲಾಗಿದೆ. ಈಗ ಕಸ ವಿಲೇವಾರಿ ಮಾಡುತ್ತಿರುವುದು ಸರಿಯಲ್ಲ. ಸಿ.ಎಸ್.ಮಂಜುನಾಥ್, ಪರಿಸರ ಪ್ರೇಮಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಸೂಚನೆ ಮೇರೆಗೆ ಗಿಡ್ಡಪ್ಪನಹಳ್ಳಿ ಮೂಲಕ ತೆರಳಿ ಅರಣ್ಯ ಪ್ರದೇಶದ ಹಿಂಭಾಗದ ಗೋಮಾಳದಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಇದಕ್ಕೂ ಅರಣ್ಯ ಇಲಾಖೆಗೂ ಸಂಬಂಧ ಇಲ್ಲ. ವರುಣ್ ಕುಮಾರ್, ವಲಯ ಅರಣ್ಯಾಧಿಕಾರಿ ಚಿಕ್ಕ ಕೋಲಿಗ ಸಮೀಪದ ಗೋಮಾಳದಲ್ಲಿ ಕಸ ವಿಲೇವಾರಿಗೆ ತಾತ್ಕಾಲಿಕ ಘಟಕ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದು, ಅದರಂತೆ ನಗರಸಭೆ ಸಿಬ್ಬಂದಿ ಮೂರ‌್ನಾಲ್ಕು ದಿನಗಳಿಂದ ಕಸ ಹಾಕುತ್ತಿದ್ದಾರೆ. ಇದನ್ನು ವಿರೋಧಿಸಿರುವ ಗ್ರಾಮಸ್ಥರ ಬಳಿ ಈ ಬಗ್ಗೆ ಮಾತನಾಡಲಾಗುವುದು. ಗೀತಾ, ತಹಸೀಲ್ದಾರ್, ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net