ಮೈಸೂರು: ರಾಜಕೀಯ ದ್ವೇಷದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರಿಗೆ ಮಸಿ ಬಳಿಯುವ ದೊಡ್ಡ ಪ್ರಯತ್ನವನ್ನು ಪ್ರತಿಪಕ್ಷಗಳು ಮಾಡುತ್ತಿವೆ ಎಂದು ಕಾಂಗ್ರೆಸ್ ಮೈಸೂರು ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಆರೋಪಿಸಿದರು.
ಕುಟುಂಬದ ಟ್ರಸ್ಟ್‌ಗೆ ಅಕ್ರಮವಾಗಿ ಸಿಎ ನಿವೇಶನ ನೀಡಲಾಗಿದೆ ಎಂದು ಖರ್ಗೆ ಅವರ ಮನೆಯಲ್ಲೇ ಇದ್ದು ರಾಜಕೀಯವಾಗಿ ಬೆಳೆದ ಕೆಲವರು ಅವರ ಮೇಲೆ ಆರೋಪ ಮಾಡಿದ್ದಾರೆ. ಸಿದ್ಧಾರ್ಥ ಟ್ರಸ್ಟ್‌ಗೆ ಮಾತ್ರವಲ್ಲ ಇತರ ಸಂಘ ಸಂಸ್ಥೆಗಳಿಗೂ ಕೆಐಎಡಿಬಿಯಿಂದ ಜಾಗ ನೀಡಿದ್ದಾರೆ. ಹಾಗಾಗಿ ಸಿದ್ಧಾರ್ಥ ಟ್ರಸ್ಟ್‌ಗೆ ಕಾನೂನಾತ್ಮಕವಾಗಿ ಜಾಗ ನೀಡಲಾಗಿದೆಯೇ ವಿನಾ, ಕುಟುಂಬಕ್ಕೆ ಅಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆರ್ಟಿಕಲ್ 371ಜೆ ಜಾರಿ ಮಾಡುವಲ್ಲಿ ಮಲ್ಲಿಕಾರ್ಜುನ ಖರ್ಗೆ ಪಾತ್ರ ದೊಡ್ಡದಾಗಿದ್ದು, ಅವರ ಬಗ್ಗೆ ಯಾವೊಬ್ಬ ರಾಜಕಾರಣಿ ಇಲ್ಲಿವರೆಗೂ ಆರೋಪ ಮಾಡಿಲ್ಲ. ಆದರೆ ರಾಜಕೀಯ ದ್ವೇಷದಿಂದ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖಂಡ ಲೆಹರ್‌ಸಿಂಗ್ ಟೀಕೆ ಮಾಡುತ್ತಾ ಖರ್ಗೆ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ ಟೀಕಿಸಿದರು.
ನಲವತ್ತು ವರ್ಷಗಳ ಹಿಂದೆಯೇ ಆರಂಭಗೊಂಡಿರುವ ಸಿದ್ಧಾರ್ಥ ಟ್ರಸ್ಟ್ ಮೂಲಕ ಬುದ್ಧ, ಅಂಬೇಡ್ಕರ್ ಚಿಂತನೆಗಳನ್ನ ತಿಳಿಸಲು ಮುಂದಾಗಿದ್ದಾರೆ. ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಕುಟುಂಬವನ್ನ ಮೇಲೆತ್ತುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಆತ್ಮಸಾಕ್ಷಿ ಇದ್ದರೆ ಛಲವಾದಿ ನಾರಾಯಣಸ್ವಾಮಿ ಅವರು ಟ್ರಸ್ಟ್ ಕಾನೂನು ದುರ್ಬಳಕೆ ಮಾಡಿಕೊಂಡಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರಮಾಣ ಮಾಡಲಿ ಎಂದರು.
ಮೈಸೂರು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ನಾರಾಯಣಸ್ವಾಮಿ ಅವರು 2006 ರಲ್ಲಿ ಬೃಂದಾವನ ಸಾಫ್ಟ್‌ವೇರ್ ಟೆಕ್ನಾಲಜಿ ಪ್ರಾರಂಭಿಸುವುದಾಗಿ ಸುಮಾರು ಎರಡು ಎಕರೆ ಭೂಮಿ ತೆಗೆದುಕೊಂಡಿದ್ದರೂ ಉದ್ದೇಶಕ್ಕೆ ಬಳಸಿಕೊಂಡಿಲ್ಲ. ಆ ಜಾಗಕ್ಕೆ ಸೇಲ್ ಡೀಡ್ ಆಗಿಲ್ಲ. ಆದ್ದರಿಂದ ಜಾಗ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಮಲ್ಲಿಕಾರ್ಜುನ ಖರ್ಗೆ ಅಭಿಮಾನಿ ಸಂಘದ ಅಧ್ಯಕ್ಷ ನಾಗವಾಲ ನರೇಂದ್ರ ಮಾತನಾಡಿ, ನಾರಾಯಣಸ್ವಾಮಿ ಕೆಐಎಡಿಬಿಯಿಂದ ಬೆಂಗಳೂರು, ಮಂಡ್ಯ, ಹೊಸಕೋಟೆ ಮೈಸೂರಿನಲ್ಲಿ ಜಾಗಗಳನ್ನು ಪಡೆದಿದ್ದಾರೆ. ಇಂತಹ ಸಮಯದಲ್ಲಿ ಸಂವಿಧಾನದ ಮೀಸಲಾತಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಆರ್‌ಎಸ್‌ಎಸ್ ಚಡ್ಡಿಯನ್ನು ವಿರೋಧಿಸಿ ತಲೆಯ ಮೇಲೆ ಹಿಡಿದುಕೊಂಡು ಮೆರವಣಿಗೆ ಮಾಡಿದ್ದ ಅವರು ಈಗ ಚಡ್ಡಿ ನಾರಾಯಣಸ್ವಾಮಿ ಆಗಿದ್ದಾರೆ ಟೀಕಿಸಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಪುರುಷೋತ್ತಮ, ಬಿ.ಕೆ.ಪ್ರಕಾಶ್, ಅನಂತ, ಎಂ.ಶಿವಣ್ಣ, ಕೂರ್ಗಳ್ಳಿ ಮಹದೇವು, ಭಾಸ್ಕರ್, ಶಿವನಾಗಪ್ಪ, ನಾರಾಯಣ ಇತರರು ಇದ್ದರು.