ತಮಿಳುನಾಡಿಗೆ ನೀರು ಹರಿಸಲು ವಿರೋಧ

CKM pro
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳ ಮುಖಂಡರು ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಗುರುಶಾಂತಪ್ಪ, ಮಹೇಶ್, ಕೆ.ಟಿ.ರಾಧಾಕೃಷ್ಣ, ಮರ್ಲೆ ಅಣ್ಣಯ್ಯ, ಪಿ.ಸಿ.ರಾಜೇಗೌಡ ಇತರರಿದ್ದರು.
Published on

ಚಿಕ್ಕಮಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ರೈತ ಸಂಘ, ದಲಿತ ಪರ, ಕನ್ನಡ ಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಬೆಳೆಗಳಿಗೆ, ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದರಿಂದ ತಮಿಳುನಾಡಿಗೆ ನೀರು ಹರಿಸಬಾರದು. ಅಂತಾರಾಜ್ಯ ಜಲವಿವಾದ ಬಗೆಹರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಸಾಧ್ಯವಾಗದಿದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ರಾಜ್ಯದ ಸಂಸದರನ್ನು ಒತ್ತಾಯಿಸಿದರು.
ಕೆಆರ್‌ಎಸ್‌ನಿಂದ ಬೆಂಗಳೂರು, ಮೈಸೂರು ಮತ್ತು ಮಂಡ್ಯಕ್ಕೆ ಕುಡಿಯುವ ನೀರೊದಗಿಸಲು ಆಗುತ್ತಿಲ್ಲ. ಪರಿಸ್ಥಿತಿ ಹೀಗಿದ್ದರೂ ತಮಿಳುನಾಡಿಗೆ ಕಾವೇರಿಯಿಂದ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಪ್ರಾಧಿಕಾರ ಸೂಚಿಸಿರುವುದು ಅವೈಜ್ಞಾನಿಕ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೀರಿನ ಅಭಾವ ಉಂಟಾದಾಗ ಎರಡೂ ರಾಜ್ಯದ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ನೀರು ಹಂಚಿಕೆ ನಿಯಮ ರೂಪಿಸಿದರೆ ಯಾವುದೇ ರಾಜ್ಯಕ್ಕೆ ತೊಂದರೆಯಾಗದು. ಕೇಂದ್ರ ಸರ್ಕಾರ ಎಲ್ಲರೂ ಒಪ್ಪುವ ಸೂತ್ರ ರಚಿಸಬೇಕೆಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ತಾಲೂಕು ಅಧ್ಯಕ್ಷ ಎಂ.ಬಿ.ಚಂದ್ರೇಗೌಡ, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಮುಖಂಡ ತಡಗಸೆ ದಿವಾಕರ, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net