ರೈತರನ್ನು ಒಕ್ಕಲೆಬ್ಬಿಸಲು ವಿರೋಧ

21 TKE 1(2)
ಅರಣ್ಯ ಇಲಾಖೆ ಧೋರಣೆ ಖಂಡಿಸಿ ರೈತ ಹಿತ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ಡಿ.ಎಸ್.ಸುರೇಶ್, ಕೆ.ಪಿ.ಕುಮಾರ್, ಎಲ್.ಎಸ್.ಶಿವಯೋಗಿ ಇತರಿದ್ದರು.
Published on

ತರೀಕೆರೆ: ತಾಲೂಕಿನ ವಿವಿಧ ಭಾಗದ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಧೋರಣೆ ಖಂಡಿಸಿ ಲಕ್ಕವಳ್ಳಿಯಲ್ಲಿ ರೈತ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಮೂಡಲಗಿರಿಯಪ್ಪ ಮಾತನಾಡಿ, ಭದ್ರಾ ಜಲಾಶಯದ ಮುಳುಗಡೆ ನಿರಾಶ್ರಿತರಿಗೆ ಸರ್ಕಾರ ಮಂಜೂರು ಮಾಡಿರುವ ಸಾಗುವಳಿದಾರರು ಮತ್ತು ಬಗರ್ ಹುಕುಂ ರೈತರ ಜಮೀನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ. ರೈತರ ಮೇಲೆ ಪ್ರಭಾವ ಬೀರುವ ಯೋಜನೆಗಳನ್ನು ರೂಪಿಸುವ ಮುನ್ನ ನೂತನ ಶಾಸನ ರಚಿಸಬೇಕು. ಮುಂದೆ ರೈತರಿಗೆ ಅನಗತ್ಯ ನೋಟಿಸ್ ನೀಡಿ ಕಿರುಕುಳ, ಒಕ್ಕಲೆಬ್ಬಿಸುವ ಭೀತಿ ಉಂಟು ಮಾಡುವ ಪ್ರಕ್ರಿಯೆ ನಡೆಸಬಾರದು ಎಂದರು.
ಅನಾದಿಕಾಲದಿಂದ ಜನ ನೆಲೆಸಿರುವ ಗ್ರಾಮಗಳಿಗೆ 94 ಸಿ ಅಡಿ ಹಕ್ಕುಪತ್ರ ನೀಡಬೇಕು. ಸಮಾಜದಲ್ಲಿ ಜೀವಿಸುವ ಹಕ್ಕಿಗೆ ಚ್ಯುತಿ ಬಾರದಂತೆ ಸೂಕ್ತ ದಾಖಲೆ ನೀಡಬೇಕು. ಪಾರಂಪರಿಕ ಅರಣ್ಯ ಹಕ್ಕಿನಡಿ ಪ್ರಸ್ತುತ ನೀಡಿರುವ 75 ವರ್ಷ ಕಾಲಮಿತಿಯನ್ನು 25 ವರ್ಷಕ್ಕೆ ಇಳಿಸಬೇಕು.ಅರಣ್ಯಇಲಾಖೆ ಅಧಿಕಾರಿಗಳು ರೈತರ ವಿರುದ್ಧ ಸುಳ್ಳು ಕೇಸ್ ಹಾಕುವುದನ್ನು ನಿಲ್ಲಿಸಬೇಕು. ಏಕಪಕ್ಷೀಯವಾಗಿ ದಾಖಲಿಸಿರುವ ಎ್ಐಆರ್ ಅನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ಕೆ.ಪಿ.ಕುಮಾರ್, ಪ್ರಮುಖರಾದ ಎಲ್.ಎಸ್.ಶಿವಯೋಗಿ, ಧನಪಾಲ್, ವೆಂಕಟೇಶ್, ವಿನಾಯಕ, ಶಿವಕುಮಾರ್, ಜೈ ಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net