

ಮೈಸೂರು: ರಾಜ್ಯದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳ ಪಿಎಚ್‌ಡಿ ಸೀಟುಗಳಿಗೆ ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಸುವ ಉನ್ನತ ಶಿಕ್ಷಣ ಇಲಾಖೆಯ ಚಿಂತನೆಗೆ ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣ ಮಂಡಲಿ ಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ.
ನಗರದ ಕ್ರಾಫರ್ಡ್ ಭವನದಲ್ಲಿ ಬುಧವಾರ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಶಿಕ್ಷಣ ಮಂಡಳಿ ಎರಡನೇ ಸಾಮಾನ್ಯ ಸಭೆಯ ಕಾರ್ಯಸೂಚಿ ವಿಷಯಗಳ ಚರ್ಚೆ ನಂತರ ಪಿಎಚ್‌ಡಿ ಪ್ರವೇಶ ಪರೀಕ್ಷೆ ಕುರಿತು ಚರ್ಚಿಸಲಾಯಿತು. ಈ ವೇಳೆ ಪಿಎಚ್‌ಡಿ ಪ್ರವೇಶ ಪರೀಕ್ಷೆಯನ್ನು ಏಕೀಕೃತಗೊಳಿಸುವ ನಿರ್ಧಾರದಿಂದ ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಧಕ್ಕೆ ಬರುತ್ತದೆ ಎಂದು ಮೈಸೂರು ವಿವಿ ಶಿಕ್ಷಣ ಮಂಡಲಿ ಸದಸ್ಯರು ಅಭಿಪ್ರಾಯಪಟ್ಟರು.
ಇದರಿಂದ ವಿಶ್ವವಿದ್ಯಾಲಯಗಳು ಪಿಯುಸಿ ಬೋರ್ಡ್ ರೀತಿ ಆಗುತ್ತವೆ. ಕುಲಪತಿಗಳನ್ನು ಕಾಲೇಜು ಪ್ರಾಂಶುಪಾಲರಾಗಿ ಮಾಡಲಾಗುತ್ತಿದೆ. ರಾಣಿಚೆನ್ನಮ ವಿಶ್ವವಿದ್ಯಾಲಯ ಪಿಎಚ್‌ಡಿ ಪ್ರವೇಶ ಪರೀಕ್ಷೆಗೆ ಕರೆ ಮಾಡಿದೆ. ಬೆಂಗಳೂರು, ಕಲಬುರಗಿ ವಿವಿಗಳು ಪರೀಕ್ಷೆ ನಡೆಸಲು ಮುಂದಾಗಿವೆ. ವಿವಿಗಳು ನಡೆಸುವ ಪರೀಕ್ಷೆಗಳಿಂದ ಯಾವುದೇ ಭಾಗದ ವಿದ್ಯಾರ್ಥಿಗೆ ತೊಂದರೆಯಾಗಿಲ್ಲ. ಆದ್ದರಿಂದ ಈ ಬಗ್ಗೆ ಅಂಕಿಸಂಖ್ಯೆಗಳ ಸಮೇತ ಉನ್ನತ ಶಿಕ್ಷಣ ಇಲಾಖೆಗೆ ಮಾಹಿತಿ ನೀಡುವಂತೆ ಸದಸ್ಯರು, ಕುಲಪತಿ ಎನ್.ಕೆ. ಲೋಕನಾಥ್ ಅವರಲ್ಲಿ ಕೋರಿದರು.
‘ಫೆ. 8ರಂದು ಕರೆದಿರುವ ಉನ್ನತ ಶಿಕ್ಷಣ ಇಲಾಖೆಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುವುದಾಗಿ’ ಕುಲಪತಿ ಎನ್.ಕೆ. ಲೋಕನಾಥ್ ಭರವಸೆ ನೀಡಿದರು.