

ಕುವೆಂಪುನಗರದ ಉದಯರವಿ ರಸ್ತೆಗೆ 40ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ನಗರಪಾಲಿಕೆ ಸದಸ್ಯರು ನಿಖರ ಮಾಹಿತಿ ಇಲ್ಲದೆ ರಸ್ತೆಯ ಹೆಸರು ಬದಲಿಸುವ ಕೆಲಸಕ್ಕೆ ಮುಂದಾಗಬಾರದು ಎಂದು ಚಿಂತಕ ಪ್ರೊ.ಕೆ.ಎಸ್. ಭಗವಾನ್ ಅಸಮಾಧಾನ ವ್ಯಕ್ತಪಡಿಸಿದರು.
ಉದಯರವಿ ರಸ್ತೆಯ ಮೊದಲ ನಿವಾಸಿಯಾದ ನಾನು, 43 ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದೇನೆ. ಉದಯರವಿ ಎಂಬುದು ರಾಷ್ಟ್ರಕವಿ ಕುವೆಂಪು ಅವರ ಮನೆಯ ಹೆಸರು. ಈ ಹೆಸರಿನಲ್ಲಿರುವ ಮೈಸೂರಿನ ಮನೆಯಲ್ಲಿಯೇ ಅವರು ಮಹಾಗ್ರಂಥಗಳು ಮತ್ತು ಕಾವ್ಯಗಳಾದ ಮಲೆಗಳಲ್ಲಿ ಮದುಮಗಳು, ಶ್ರೀರಾಮಾಯಣ ದರ್ಶನಂ, ಕಾನೂರು ಹೆಗ್ಗಡತಿ ಮುಂತಾದ ಎಲ್ಲ ಕೃತಿಗಳನ್ನು ರಚಿಸಿದ್ದಾರೆ. ಅಂತಹ ಹಿನ್ನೆಲೆ ಆ ಮನೆಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರಪಾಲಿಕೆಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಕುವೆಂಪು ಅವರ ಹೆಸರಿನ ಕುರಿತು, ರಸ್ತೆ ಮತ್ತು ಉದ್ಯಾನಗಳಿಗೆ ನಾಮಕರಣ ಮಾಡಿರುವ ಕುರಿತು ಚರ್ಚಿಸಲಾಗಿದೆ. ಮೊದಲು ಅವರ ಕೊಡುಗೆಯನ್ನು ಅರ್ಥ ಮಾಡಿಕೊಳ್ಳಬೇಕು. ಅನಗತ್ಯವಾಗಿ ಹೆಸರು ಬದಲಿಸುವುದು, ಬೇರೆ ಹೆಸರು ಸೂಚಿಸುವುದು ಬೇಡ ಎಂದರು.
ಬಿಜೆಪಿ ಮುಖಂಡ ಮೆಲ್ಲಹಳ್ಳಿ ಮಹದೇವಸ್ವಾಮಿ, ವಿಶ್ವಮಾನವ ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ಎಂ.ಜೆ. ಸುರೇಶ್‌ಗೌಡ ಇದ್ದರು.