

ಕಲಘಟಗಿ: ತಾಲೂಕಿನ ಬೀರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿ ಬೀರವಳ್ಳಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಬೀರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ನಾಲ್ವರು ಶಿಕ್ಷಕರಿದ್ದಾರೆ. ಈ ಪೈಕಿ ಮೂವರನ್ನು ವರ್ಗಾವಣೆ ಮಾಡಲು ಯತ್ನ ನಡೆದಿದೆ. ಹೀಗೆ ಮಾಡಿದರೆ ಎಲ್ಲ ಮಕ್ಕಳಿಗೆ ಒಬ್ಬರೇ ಪಾಠ ಮಾಡುವ ಪರಿಸ್ಥಿತಿ ಬರುತ್ತದೆ. ಹೀಗಾಗಿ ಶಿಕ್ಷಕರನ್ನು ವರ್ಗಾವಣೆ ಮಾಡಬಾರದು ಎಂದು ಒತ್ತಾಯಿಸಿದರು.
ಪ್ರತಿಕ್ರಿಯಿಸಿದ ಬಿಇಒ ಉಮಾದೇವಿ ಅವರು, ಸರ್ಕಾರದ ಹಂತದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆದಿದೆ. ಶಿಕ್ಷಕರು ವರ್ಗಾವಣೆ ಬಯಸಿ ಬೇರೆಡೆ ತೆರಳಲು ಮುಂದಾಗಿದ್ದಾರೆ. ಶಾಲೆಗೆ ಬೇರೆ ಶಿಕ್ಷಕರು ಬರುವವರೆಗೂ ಬೀರವಳ್ಳಿ ಶಾಲೆಯಿಂದ ವರ್ಗಾವಣೆ ಆಗಿರುವ ಶಿಕ್ಷಕರನ್ನು ಅಲ್ಲಿಯೇ ಮುಂದುವರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಬಿ.ಎಂ. ಮಟ್ಟಿ, ಮಹಾದೇವಪ್ಪ ತಾಳಿಕೋಟಿ, ನಾಗಪ್ಪ ಜಿನ್ನೂರ, ಯಲ್ಲಪ್ಪ ಲಮಾಣಿ, ಸಂಗಪ್ಪ ಕರತಂಗಿ, ಗುರುಶಿದ್ದಪ್ಪ ವಡ್ಡರ, ಶಂಕ್ರಪ್ಪ ಹಡಪದ, ನೀಲಪ್ಪ ಇಂಗಳಗಿ, ಬಸಪ್ಪ ತರಕಣ್ಣವರ, ನಿಂಗಪ್ಪ ಕರತಂಗಿ, ಸಿದ್ದಪ್ಪ ಕೊಪ್ಪದ್ದ, ಮಂಜುನಾಥ ಗೌರಿ, ನಿಂಗಪ್ಪ ಕಟ್ಟಿ, ಶಂಕರಗೌಡ ಪಾಟೀಲ, ಮಂಜುನಾಥ ವಡ್ಡರ, ಕಲ್ಲನಗೌಡ ಪಾಟೀಲ, ಶಿವನಗೌಡ ಮುದಿಗೌಡರ, ತಿಪ್ಪಣ್ಣ ಕುಂಕೂರು ಇತರರಿದ್ದರು.