ಭಟ್ಕಳದಲ್ಲಿ ವಕ್ಪ್ ಸಂಶೋಧನಾ ಬಿಲ್​ಗೆ ವಿರೋಧ

BKL WAKF VIRODHA
Published on

ಭಟ್ಕಳ: ಗೋವಾದಿಂದ ಮಂಗಳೂರಿನವರೆಗಿನ ಕರಾವಳಿ ಜಿಲ್ಲೆಗಳ ಮುಸ್ಲಿಂ ಮುಖಂಡರ ಒಗ್ಗಟ್ಟಿನ ಪ್ರದರ್ಶನಕ್ಕೆ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಜೀಂ ನೇತೃತ್ವದಲ್ಲಿ ಬೃಹತ್ ವೇದಿಕೆ ಸಿದ್ಧಗೊಂಡಿದೆ. ವಕ್ಪ್ ಸಂಶೋಧನಾ ಬಿಲ್ ವಿರೋಧಿಸಲು ಮಂಗಳವಾರ ನವಾಯತ್ ಕಾಲನಿಯ ರಾಬಿತಾ ಸೊಸೈಟಿಯ ಸಭಾಂಗಣದಲ್ಲಿ ಮುಸ್ಲಿಂ ಮುಖಂಡರ ಸಭೆ ನಡೆಯಿತು.

ತಂಜೀಂ ನೇತೃತ್ವದಲ್ಲಿ ಕರಾವಳಿಯ ಸಮಸ್ತ ಮುಸ್ಲಿಮರ ಏಕತೆಯ ಸಂಕೇತವಾಗಿ ಒಂದು ವೇದಿಕೆ ರಚಿಸಲು ಒಪ್ಪಿಗೆ ನೀಡಲಾಗಿದೆ. ವಕ್ಪ್ ಮಸೂದೆ ಸೇರಿದಂತೆ ಕೇಂದ್ರ ಸರ್ಕಾರದ ಕರಾಳ ಕಾನೂನುಗಳ ವಿರುದ್ಧ ನಿರಂತರ ಪ್ರತಿಭಟನೆ ಹಾಗೂ ಶುಕ್ರವಾರ ಜಿಲ್ಲಾದ್ಯಂತ ಪ್ರತಿಭಟನಾ ಸಭೆಗಳು, ಮನವಿ ಪತ್ರ ಸಲ್ಲಿಕೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ವನಿಸಲಾಗಿದೆ. ಮುಂಬರುವ ದಿನಗಳಲ್ಲಿ ಸಿಎಎ ಮತ್ತು ಎನ್​ಆರ್​ಸಿ ರೀತಿಯಲ್ಲಿ ವಕ್ಪ್ ಕಾಯ್ದೆ ವಿರೋಧಿಸಿ ಸತತ ಪ್ರತಿಭಟನೆಗಳಿಗೆ ಕರಾವಳಿಯ ಮುಸ್ಲಿಂ ಸಮುದಾಯವು ಒಗ್ಗಟ್ಟಾಗಬೇಕು ಎಂದು ಸಭೆಯಲ್ಲಿ ಮುಖಂಡರು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತಂಜೀಂ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ ಮಾತನಾಡಿದರು. ಸಭೆಯಲ್ಲಿ ಮಂಗಳೂರಿನ ಮಾಜಿ ಮೇಯರ್ ಅಶ್ರಫ್ ಬ್ಯಾರಿ, ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ ಮೌಲಾನಾ ಮುಹಮ್ಮದ್ ಇಲಿಯಾಸ್ ನದ್ವಿ, ಮಾಜಿ ಶಾಸಕ ಮೋಹಿದ್ದೀನ್ ಬಾವಾ, ರಾಬಿತಾ ಸೊಸೈಟಿ ಪ್ರಧಾನ ಕಾರ್ಯದರ್ಶಿ ಡಾ. ಅತಿಕುರ್ರಹ್ಮಾನ್ ಮುನಿರಿ, ಉಡುಪಿ ಮುಸ್ಲಿಂ ಒಕ್ಕೂಟದ ಮುಹಮ್ಮದ್ ಮೌಲಾ, ತಂಜೀಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ತಂಜೀಂ ರಾಜಕೀಯ ಸಮಿತಿ ಸಂಚಾಲಕ ಸೈಯ್ಯದ್ ಇಮ್ರಾನ್ ಲಂಕಾ, ಜಮಾಅತೆ ಇಸ್ಲಾಮಿ ಹಿಂದ್ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಅಬ್ದುಲ್ ಮನ್ನಾನ್ ಸಿರ್ಸಿ, ಎಸ್​ಡಿಪಿಐ ಜಿಲ್ಲಾಧ್ಯಕ್ಷ ತೌಫೀಖ್ ಬ್ಯಾರಿ, ನಮ್ಮ ನಾಡು ಒಕ್ಕೂಟದ ಕಾರ್ಯದರ್ಶಿ ಹುಸೇನ್ ಹೈಕಾಡಿ, ಎಪಿಸಿಆರ್ ರಾಜ್ಯ ಕಾರ್ಯದರ್ಶಿ ಹುಸೇನ್ ಕೋಡಿ ಬೇಂಗ್ರೆ ಸೇರಿದಂತೆ ಗೋವಾ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಜಮಾತ್​ಗಳ ಮುಖಂಡರು ಮತ್ತು ಪ್ರತಿನಿಧಿಗಳು ಭಾಗವಹಿಸಿ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net