ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ತರಕಾರಿ ಅಂಗಡಿ ತೆರವಿಗೆ ವಿರೋಧ

16MDG2
Published on

ಮೂಡಿಗೆರೆ: ಜಿಪಂ ಸಿಇಒ ಕೀರ್ತನ ಅವರ ಸೂಚನೆ ಹಿನ್ನಲೆಯಲ್ಲಿ ಕಡೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ಬದಿಯ, ಹಳೆ ಮೂಡಿಗೆರೆ ಗ್ರಾಮದಲ್ಲಿರುವ ತರಕಾರಿ ಅಂಗಡಿ ತೆರವುಗೊಳಿಸಲು ಗ್ರಾಪಂ ಅಧಿಕಾರಿಗಳು ಮುಂದಾದಾಗ ಗ್ರಾಮಸ್ಥರು ಪಕ್ಷಭೇದ ಮರೆತು ತರಕಾರಿ ಅಂಗಡಿ ತೆರವುಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಶನಿವಾರ ಹಳೆಮೂಡಿಗೆರೆ ಗ್ರಾಪಂ ಕಚೇರಿ ಎದುರು ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಗ್ರಾಪಂ ಮಾಜಿ ಅಧ್ಯಕ್ಷ ಲೋಕವಳ್ಳಿ ರಮೇಶ್ ಮಾತನಾಡಿ, ತರಕಾರಿ ಅಂಗಡಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಸೇರಿಲ್ಲ. ಹೆದ್ದಾರಿ ಅಗಲೀಕರಣಕ್ಕಾಗಿ ಗಡಿ ಗುರುತು ಮಾಡಿರುವ ಸ್ಥಳದಿಂದ ಅಂಗಡಿ ದೂರದಲ್ಲಿದೆ. ಜಾಗದ ಮಾಲೀಕರ ಹಿರಿಯ ಸಹೋದರಿ ಮಂಗಳೂರಿನಲ್ಲಿ ವಾಸವಿದ್ದಾರೆ. ರಸ್ತೆಗೆ ತೊಂದರೆಯಾಗುವ ನೆಪದಲ್ಲಿ ಆ ವೃದ್ದೆ ಸ್ಥಳೀಯ ಗ್ರಾಪಂ, ತಾಪಂ, ಜಿಪಂ ಹಾಗೂ ಪೊಲೀಸರಿಗೆ ಉದ್ದೇಶ ಪೂರ್ವಕವಾಗಿ ದೂರು ನೀಡಿದ್ದಾರೆ ಎಂದು ದೂರಿದರು.

ಸ್ಥಳವನ್ನು ಜಾಗದ ಮಾಲೀಕರು ತರಕಾರಿ ಅಂಗಡಿ ಮಾಲೀಕರಿಗೆ ಮಾಸಿಕ 9 ಸಾವಿರ ರೂ.ಗೆ ಬಾಡಿಗೆ ನೆಲೆಯಲ್ಲಿ ನೀಡಿದ್ದಾರೆ. ತರಕಾರಿ ಅಂಗಡಿಯಿಂದ ಹೆದ್ದಾರಿಗೆ ತೊಂದರೆಯಾಗಿಲ್ಲ. ತರಕಾರಿ ಅಂಗಡಿ ತೆರೆವುಗೊಳಿಸಲು ಅವಕಾಶ ನೀಡುವುದಿಲ್ಲ. ಬಲವಂತವಾಗಿ ಅಧಿಕಾರಿಗಳು ತೆರವುಗೊಳಿಸಲು ಮುಂದಾದರೆ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಹಾಗೂ ಮೂಡಿಗೆರೆ ಪಟ್ಟಣ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

ಗ್ರಾಪಂ ಪಿಡಿಒ ಪ್ರಶಾಂತ್‌ಗೆ ಮನವಿ ಸಲ್ಲಿಸಲಾಯಿತು. ಗ್ರಾಪಂ ಉಪಾಧ್ಯಕ್ಷೆ ಸೋನಿಯಾ ಕ್ರಾಸ್ತಾ, ಸದಸ್ಯರಾದ ಜುಬೇರ್‌, ಜಾನಕಿ, ಜ್ಯೋತಿ ಸಾಲ್ದಾನ, ಸಫಿಯಾ, ಗ್ರಾಪಂ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಯೂಬ್, ಗ್ರಾಮಸ್ಥರಾದ ಬಿ.ರುದ್ರಯ್ಯ, ಎಂ.ಆರ್.ಸತೀಶ್, ನಂಜುಂಡ, ರಾಮು, ಲಕ್ಷ್ಮಣ ಪೂಜಾರಿ, ಯಾಕೂಬ್ ಗೋಣಿಗದ್ದೆ, ಅಬ್ದುಲ್ ರಜಾಕ್, ಗ್ಯಾರೇಜ್ ಕೃಷ್ಣ, ಮಹಮ್ಮದ್ ಹನೀಫ್ ಹೈದ್ರೋಸ್, ಜಗದೀಶ್, ಸುಲೇಮಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net