

ಬೆಂಗಳೂರು: ವಿದೇಶಗಳಿಂದ ಬರುವವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ವಾರಂಟೈನ್ ಮಾಡುವ ಸರ್ಕಾರದ ನಿರ್ಧಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಕೆಂಪು ವಲಯದಿಂದ ಬದಲಾಯಿಸುವಂತೆ ಕೋರಿ ಜಿಲ್ಲೆಯ ನಾಲ್ಕು ತಾಲೂಕುಗಳ ಶಾಸಕರು ಹಾಗೂ ವಿವಿಧ ಸಂಘಟನೆ ಮುಖಂಡರು ಬುಧವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರಿಗೆ ಮನವಿ ಸಲ್ಲಿಸಿದರು.
ವಿದೇಶಗಳಲ್ಲಿರುವ ರಾಜ್ಯದ ಜನರನ್ನು ಕರೆತರುವ ಸರ್ಕಾರದ ಕ್ರಮ ಪ್ರಶಂಸನೀಯವಾಗಿದೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅವರನ್ನು ಕ್ವಾರಟೈಂನ್ ಮಾಡಬಾರದು. ವಿದೇಶದಿಂದ ಬರುವವರನ್ನು ಅವರವರ ಜಿಲ್ಲೆಗೆ ಕಳಿಸಿ ಅಲ್ಲಿಯೇ ಕ್ವಾರಂಟೈನ್ ಮಾಡಬೇಕು ಎಂದು ನಾಲ್ವರೂ ಶಾಸಕರು ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಪತ್ತೆಯಾದ 5 ಕರೊನಾ ಸೋಂಕು ಪ್ರಕರಣಗಳಲ್ಲಿ ಎಲ್ಲವೂ ನೆಗೆಟಿವ್ ವರದಿ ಬಂದಿದೆ. ಇದಾದ ಬಳಿಕ 28 ದಿನ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕದ ವ್ಯಕ್ತಿಗಳ ಕ್ವಾರಂಟೈನ್ ಅವಧಿ ಮುಗಿದಿದೆ. ಇಲ್ಲಿಯವರೆಗೆ ಬೇರೆ ಯಾವುದೇ ಹೊಸ ಪ್ರಕರಣ ಬೆಳಕಿಗೆ ಬಂದಿಲ್ಲ. ಆದ್ದರಿಂದ ಗ್ರಾಮಾಂತರ ಜಿಲ್ಲೆ ಕರೊನಾದಿಂದ ಮುಕ್ತವಾಗಿದೆ. ಇಂಥ ವೇಳೆ ಜಿಲ್ಲೆಯನ್ನು ಕೆಂಪುವಲಯದಿಂದ ಗುರುತಿಸುವುದು ಸರಿಯಲ್ಲ. ಆದ್ದರಿಂದ ಜಿಲ್ಲೆಯನ್ನು ಹಸಿರುವಲಯಕ್ಕೆ ಬದಲಾಯಿಸುವಂತೆ ಶಾಸಕರು ಹಾಗೂ ವಿವಿಧ ಸಂಘಟನೆ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಸಾರ್ವಜನಿಕ ಸ್ಪಷ್ಟನೆಗೆ ಜಿಪಂ ಉಪಾಧ್ಯಕ್ಷೆ ಮನವಿ: ವಿದೇಶದಿಂದ ಬರುವವರಿಗೆ ಜಿಲ್ಲೆಯಲ್ಲಿ ಕ್ವಾರಂಟೈನ್ ಮಾಡಲು ಉದ್ದೇಶಿಸಿರುವುದು ಸ್ಪಷ್ಟವಾಗಿದೆ. ಕ್ವಾರಂಟೈನ್ ಮಾಡಲು ಗುರುತಿಸಿರುವ ನಿರ್ದಿಷ್ಟ ಸ್ಥಳಗಳಲ್ಲಿ ಅಗತ್ಯ ಸೇವೆ ಸಲ್ಲಿಸುವ ಆರೋಗ್ಯ ಸಿಬ್ಬಂದಿ, ಪೌರಕಾರ್ಮಿಕ ಸಿಬ್ಬಂದಿ ಸೇರಿ ಈ ಸ್ಥಳಕ್ಕೆ ಅಗತ್ಯ ವಸ್ತುಗಳಾದ ದಿನಸಿ, ತರಕಾರಿ, ಕುಡಿವ ನೀರು ಮತ್ತಿತರ ವಸ್ತುಗಳ ಸರಬರಾಜು ಮಾಡುವ ಆರೋಗ್ಯ ದೃಷ್ಟಿಯಿಂದ ಜಿಲ್ಲಾಡಳಿತ ತೆಗೆದುಕೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಸ್ಪಷ್ಟನೆ ಇಲ್ಲವಾಗಿದೆ. ಕೂಡಲೇ ಈ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು ಎಂದು ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಮನವಿ ಮಾಡಿದರು.
ಜಿಲ್ಲೆಯಲ್ಲಿ ಕರೊನಾ ಹಿಮ್ಮೆಟ್ಟಿಸುವಲ್ಲಿ ಜಿಲ್ಲೆ ಯಶಸ್ವಿಯಾಗಿದೆ. ಇದಕ್ಕೆ ಜಿಲ್ಲಾಡಳಿತದ ಶ್ರಮ ಹಾಗೂ ಸಾರ್ವಜನಿಕರ ಸಹಕಾರವೇ ಕಾರಣ. ಆದರೆ ಹಸಿರುವಲಯವಾಗಿ ಗುರುತಿಸಿಕೊಳ್ಳಬೇಕಾದ ಜಿಲ್ಲೆಯಲ್ಲಿ ಕರೊನಾ ತೀವ್ರಗೊಳ್ಳುವ ಅತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.
ವಿದೇಶಗಳಿಂದ ಬರುವವರನ್ನು ಗ್ರಾಮಾಂತರ ಜಿಲ್ಲೆಯಲ್ಲಿ ಕ್ವಾರಂಟೈನ್‌ಗೆ ವಿರೋಧ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಕೆಂಪು ವಲಯದಿಂದ ಬದಲಾಯಿಸುವಂತೆ ಜಿಲ್ಲೆಯ ನಾಲ್ವರು ಶಾಸಕರು ಮಾಡಿರುವ ಮನವಿ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ