

ನೆಲಮಂಗಲ: ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀರಕಣ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿ ಪದಾಧಿಕಾರಿಗಳು ಸೋಮವಾರ ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿ ಪ್ರತಿಭಟನೆಗೆ ನಡೆಸಿದರು.
ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷ ವಿ.ಮಂಜುನಾಥ್ ಮಾತನಾಡಿ, ಕೇಂದ್ರ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವುದು ಬೇಸರದ ಸಂಗತಿ. ವಿದ್ಯುತ್ ಜನರ ಮೂಲ ಸೌಕರ್ಯಗಳಲ್ಲಿ ಒಂದಾಗಿದೆ. ರೈತರಿಗೆ, ನೇಕಾರರಿಗೆ, ಬಡವರಿಗೆ ಸೇರಿ ಕೂಲಿಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಖಾಸಗೀಕರಣದಿಂದ ಸೌಲಭ್ಯ ವಂಚಿತರಾಗಬೇಕಾಗಲಿದೆ ಎಂದರು.
ಬಂಡವಾಳಶಾಹಿಗಳಿಗೆ ಅನುಕೂಲವಾಗಲಿರುವ ಖಾಸಗೀಕರಣ ಸಣ್ಣಪ್ರಮಾಣದ ವಿದ್ಯುತ್ ಗುತ್ತಿಗೆದಾರರಿಗೆ ಮಾರಕವಾಗಲಿದೆ. ಇದನ್ನು ಖಂಡಿಸಿ ಸಾಂಕೇತಿಕವಾಗಿ ರಾಜ್ಯದ ಎಲ್ಲ ವಲಯಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಅ.22 ರಂದು ಕೇಂದ್ರ ಸಮಿತಿಯಿಂದ ರಾಜ್ಯ ರಾಜಧಾನಿಯಲ್ಲಿ ಬೃಹತ್‌ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ವಿದ್ಯುತ್ ವ್ಯವಸ್ಥೆಯಲ್ಲಿ ಗುತ್ತಿಗೆದಾರರು ಮಹತ್ವದ ಪಾತ್ರವಹಿಸಿಕೊಂಡು ಬಂದಿದ್ದಾರೆ. ರಾಜ್ಯ ದೇಶವ್ಯಾಪಿ ಇರುವ ಲಕ್ಷಾಂತರ ಗುತ್ತಿಗೆದಾರರಿಗೆ ಅನ್ಯಾಯ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇವಲ ಬಂಡವಾಳಶಾಹಿಗಳಿಗೆ ಅನುಕೂಲವಾಗಲಿರುವ ತಿದ್ದುಪಡಿ ನಿರ್ಧಾರವನ್ನು ಕೈಬಿಡಬೇಕು ಎಂದು ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಹಕಾರ್ಯದರ್ಶಿ ಬಿ.ಮಾರಯ್ಯ ತಿಳಿಸಿದರು.
ಬೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಗಂಗರಾಜು ಅವರಿಗೆ ಮನವಿ ಸಲ್ಲಿಸಿದರು.
ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕು ಸಮಿತಿ ಉಪಾಧ್ಯಕ್ಷರಾದ ಯೋಗಾನಂದ, ಎನ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಜಿ.ಎಸ್.ಹೊನ್ನಪ್ಪ, ಕೋಶಾಧ್ಯಕ್ಷ ಎನ್.ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.