ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ವಿರೋಧ

22 SBG-1 BJP Leader Arrest
Published on

ಶ್ರವಣಬೆಳಗೊಳ : ಸಾಹಿತಿ ಬಾನು ಮುಷ್ತಾಕ್ ದಸರಾ ಉದ್ಘಾಟಿಸಲು ಅಡ್ಡಿಪಡಿಸುತ್ತಾರೆಂಬ ಹಿನ್ನೆಲೆಯಲ್ಲಿ ಮೈಸೂರಿಗೆ ಹೊರಟಿದ್ದ ಸ್ಥಳೀಯ ಬಿಜೆಪಿ ಮುಖಂಡರನ್ನು ಸೋಮವಾರ ಬೆಳಗ್ಗೆ ಶ್ರವಣಬೆಳಗೊಳ ಠಾಣೆ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮುಖಂಡ ಡಿ.ಎಂ.ರವಿ ಮಾತನಾಡಿ, ಹಿಂದುಗಳ ಸಂಭ್ರಮದ ಹಬ್ಬ ದಸರಾ ಮಹೋತ್ಸವ ಉದ್ಘಾಟನೆಗೊಳ್ಳುತ್ತಿದೆ. ಆದರೆ ಉದ್ಘಾಟನೆಗೆ ತೊಂದರೆ ನೀಡುತ್ತಾರೆ ಎನ್ನುವ ನೆಪವೊಡ್ಡಿ ಮನೆಯಲ್ಲಿ ಮಲಗಿದ್ದ ಹಿಂದು ಮುಖಂಡರನ್ನು ಸರ್ಕಾರ ಬಂಧಿಸುತ್ತಿರುವುದು ಅಮಾನವೀಯ ಎಂದು ಕಿಡಿಕಾರಿದರು.

ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಬಿಜೆಪಿ ಮುಖಂಡರು ಹಾಗೂ ಹಿಂದುಪರ ಹೋರಾಟಗಾರರನ್ನು ಬಂಧಿಸಿ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಮಾಡಿಸುವುದು ರಾಜ್ಯ ಸರ್ಕಾರಕ್ಕೆ ಬೇಕಿರಲಿಲ್ಲ. ಇದು ಖಂಡನೀಯ. ಹಿಂದುಗಳ ಮೇಲೆ ಎಷ್ಟೇ ದೌರ್ಜನ್ಯ ನಡೆಸಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿರುವ ಈ ಸರ್ಕಾರಕ್ಕೆ ಎಲ್ಲರೂ ಒಂದಾಗಿ ತಕ್ಕ ಪಾಠ ಕಲಿಸುವ ಸಮಯ ಹತ್ತಿರವಾಗುತ್ತಿದೆ ಎಂದರು.

ಬಿಜೆಪಿ ಮುಖಂಡ ಸಿ.ಆರ್.ಚಿದಾನಂದ ಮಾತನಾಡಿ, ನಾಡಹಬ್ಬ ದಸರಾ ಮಹೋತ್ಸವಕ್ಕೆ ನಮ್ಮ ಬಿಜೆಪಿ ಮುಖಂಡರು ಹಾಗೂ ಹಿಂದು ಕಾರ್ಯಕರ್ತರು ಹೋಗುವುದನ್ನು ತಡೆಯುವ ನಡೆ ಖಂಡನೀಯ. ಇವರ ತುಷ್ಟೀಕರಣ ಯಾವ ಮಟ್ಟಕ್ಕೆ ಇದೆ ಎಂದರೆ ಕುಕ್ಕರ್‌ನಲ್ಲಿ ಬಾಂಬ್ ಇಟ್ಟವರನ್ನು ಬ್ರದರ್ಸ್ ಎಂದು ಕರೆಯುತ್ತಾರೆ. ಬಾನು ಮುಷ್ತಾಕ್ ಅವರಿಗೆ ದೇವರ ಮೇಲೆ ವಿಶ್ವಾಸ ಹಾಗೂ ನಂಬಿಕೆಯೇ ಇಲ್ಲ. ಅಂತಹವರನ್ನು ಕರೆದು ದಸರಾ ಉದ್ಘಾಟಿಸಿ ಹಿಂದುಗಳ ಭಾವನೆಗೆ ಈ ಸರ್ಕಾರ ನೋವುಂಟು ಮಾಡಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರೂಪೇಶ್, ಮಂಜು ಗುರಿಗಾರನಹಳ್ಳಿ, ಕುಮಾರ್, ಸಾಗರ್ ಗೌಡ, ಮಂಜುನಾಥ್, ಚಂದ್ರರಾಜ್, ರಾಜೇಶ್, ಮಂಜು ಬೋವಿ, ಸ್ವಾಮಿ, ರಾಜೇಶ್, ನವೀನ್, ಸಣ್ಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net