

ಹನೂರು: ಲೇಬರ್ ಕೋಡ್ ಜಾರಿ ವಿರೋಧಿಸಿ ಹಾಗೂ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ಹನೂರಿನಲ್ಲಿ ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು.
ಪಟ್ಟಣದ ಪೆಟ್ರೋಲ್ ಬಂಕ್ ಬಳಿ ಜಮಾಯಿಸಿದ್ದ ಪಂಚಾಯಿತಿ ನೌಕರರು, ಮ.ಬೆಟ್ಟ ಹಾಗೂ ಬಂಡಳ್ಳಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ತಾಲೂಕು ಪಂಚಾಯಿತಿ ಕಚೇರಿಗೆ ಆಗಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಂಘದ ಕಾರ್ಯದರ್ಶಿ ತೆಳ್ಳನೂರು ಸಿದ್ದರಾಜು ಮಾತನಾಡಿ, ಕೇಂದ್ರ ಸರ್ಕಾರ 2019-20ರಲ್ಲಿ ನಾಲ್ಕು ಲೇಬರ್ ಕೋಡ್‌ಗಳನ್ನು ಅಂಗಿಕರಿಸಿದ್ದು, ಇದರಲ್ಲಿ ಹಲವು ಕಾರ್ಮಿಕ ವಿರೋಧಿ ಅಂಶಗಳನ್ನು ರಾಜ್ಯ ಸರ್ಕಾರದ ಮೂಲಕ ತಿದ್ದುಪಡಿ ಮಾಡಿ ಜಾರಿಗೆ ತರಲು ಹುನ್ನಾರ ನಡೆಸುತ್ತಿದೆ. ಈ ತಿದ್ದುಪಡಿಯ ಅಂಶಗಳು ಜಾರಿಯಾದಲ್ಲಿ ನೌಕರರ ಹಿತರಕ್ಷಣೆಗೆ ತೊಡುಕಾಗಿ ಪರಿಣಮಿಸಲಿದೆ. ಆದ್ದರಿಂದ ಲೇಬರ್ ಕೋಡ್ ಜಾರಿ ಮಾಡದಂತೆ ಕ್ರಮ ವಹಿಸಬೇಕು. ಹಾಗೆಯೇ ಪ್ರಸ್ತುತ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಕನಿಷ್ಠ ವೇತನ ಕರಡು ಅಧಿಸೂಚನೆಯಲ್ಲಿ ನೌಕರರಿಗೆ 31 ಸಾವಿರ ರೂ. ವೇತನ ನಿಗದಿಪಡಿಸಬೇಕು. ಸೇವಾ ಹಿರಿತನ ಭತ್ಯೆ ಹೆಚ್ಚಿಸಬೇಕು. ಪಿಂಚಣಿ, ವಿಮೆ ಸೌಕರ್ಯ ಒದಗಿಸಬೇಕು. ಚಾಲಕರಿಗೆ 15 ಸಾವಿರ ರೂ. ಗೌರವಧನ ನೀಡಬೇಕು ಎಂದು ಒತ್ತಾಯಿಸಿದರು.
ಬಳಿಕ ಮನವಿಯನ್ನು ಸ್ವೀಕರಿಸಿದ ತಾಪಂ ಲೆಕ್ಕಾಧಿಕಾರಿ ಶಶಿಕಲಾ ಮಾತನಾಡಿ, ಈ ಬಗ್ಗೆ ತಾಪಂ ಇಒ ಅವರ ಗಮನಕ್ಕೆ ತಂದು ಮನವಿಯನ್ನು ಸರ್ಕಾರಕ್ಕೆ ಕಳುಹಿಸಲು ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಲ್ಲೂರು ದೊರೆಸ್ವಾಮಿ, ಉಪಾಧ್ಯಕ್ಷ ಕಾಂತರಾಜು, ಖಜಾಂಚಿ ಮಾದಪ್ಪ, ನೌಕರರಾದ ಶಂಕರ್, ಜಗದೀಶ್, ಪ್ರಶಾಂತ್, ಕನಕರಾಜು ಹಾಗೂ ಇತರರು ಇದ್ದರು.