

ನಂದಗುಡಿ: ಹೊಸಕೋಟೆ ತಾಲೂಕಿನ ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿ ವ್ಯಾಪ್ತಿಯ 36 ಗ್ರಾಮಗಳ 18,500 ಸಾವಿರ ಎಕರೆ ಕೃಷಿ ಭೂಮಿಯನ್ನು ಟೌನ್‌ಶಿಪ್ ನಿರ್ಮಾಣಕ್ಕೆಂದು ರೈತರ ವಿರೋಧದ ನಡುವೆಯೂ ವಶಕ್ಕೆ ಪಡೆಯಲು ಮುಂದಾಗಿರುವ ರಾಜ್ಯ ಸರ್ಕಾರದ ನೀತಿ ವಿರುದ್ಧ ರೈತರು ಬೃಹತ್ ಪ್ರತಿಭಟನೆಗೆ ಮುಂದಾಗಬೇಕಿದೆ ಎಂದು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚೇಗೌಡ ಕರೆ ನೀಡಿದರು.
ನಂದಗುಡಿ ಹೋಬಳಿಯ ಇಟ್ಟಸಂದ್ರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಕೃಷಿ ನೆಚ್ಚಿಕೊಂಡು ಜೀವನ ಸಾಗಿಸುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಫಲವತ್ತಾದ ಕೃಷಿ ಭೂಮಿಯಲ್ಲಿ ನಂದಗುಡಿ ಟೌನ್‌ಶಿಪ್ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಭೂ ಸ್ವಾಧೀನಕ್ಕೆ ಅವಕಾಶ ಕೊಡುವುದಿಲ್ಲ. ಇದರ ವಿರುದ್ಧ ಯಾವುದೇ ಹೋರಾಟಕ್ಕೂ ರೈತರು ಸನ್ನದ್ಧರಾಗಬೇಕಾಗಿದೆ ಎಂದರು.
ನಂದಗುಡಿ ಭಾಗದ ರೈತರೊಂದಿಗೆ ಟೌನ್‌ಶಿಪ್ ಹೆಸರಿನಲ್ಲಿ ಆಟವಾಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ರೈತರು ಎಲ್ಲ ಬಗೆಯ ಹೋರಾಟಕ್ಕೂ ಸಿದ್ಧರಾಗಿದ್ದೇವೆ. ಹೂಡಿಕೆದಾರರನ್ನು ನಂಬಿಕೊಂಡು ಸರ್ಕಾರ ಭೂಮಿ ವಶಕ್ಕೆ ಪಡೆಯಲು ಸಂಚು ರೂಪಿಸುತ್ತಿದೆ. ಅಧಿಕಾರ ಇದೆ ಅಂತಾ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದರೆ ನಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಎಲ್ಲ ಬಗೆಯ ಹೋರಾಟಕ್ಕೆ ಸಜ್ಜಾಗುತ್ತೇವೆ ಎಂದು ಎಚ್ಚರಿಸಿದರು.
ಭೂ ಸ್ವಾಧೀನ ವಿರೋಧಿ ಹೋರಾಟಕ್ಕೆ ಪಕ್ಷಾತೀತವಾಗಿ ಎಲ್ಲರ ಬೆಂಬಲ ಕೋರಲಾಗುವುದು. ರೈತ ವಿರೋಧಿ ನೀತಿ ಖಂಡಿಸಿ ನಂದಗುಡಿ, ಹೊಸಕೋಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಡಿಸಿ ಕಚೇರಿ, ವಿಧಾನಸೌಧ, ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡು ಯೋಜನೆ ಕೈ ಬೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.