ಮೂಳೂರಿನಲ್ಲಿ ಎಸ್‌ಟಿಪಿ ನಿರ್ಮಾಣಕ್ಕೆ ವಿರೋಧ

Published on

ಪಡುಬಿದ್ರಿ: ಮೂಳೂರಿನ ಜನವಸತಿ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಾಪು ಪುರಸಭೆಯ ಕೊಳಚೆನೀರು ಶುದ್ಧೀಕರಣ ಘಟಕ(ಎಸ್‌ಟಿಪಿ)ಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಘಟಕ ನಿರ್ಮಿಸಿದಂತೆ ಆಗ್ರಹಿಸಿ ಗ್ರಾಮಸ್ಥರೆಲ್ಲರೂ ಏ.24ರಂದು ಕಾಪು ಪುರಸಭೆ ಮುಖ್ಯಾಧಿಕಾರಿ, ತಹಸೀಲ್ದಾರ್, ಶಾಸಕ, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗುವುದು ಎಂದು ಪುರುಷೋತ್ತಮ ಸಾಲ್ಯಾನ್ ತಿಳಿಸಿದರು.

ಗ್ರಾಮಸ್ಥರನ್ನು ವಿಶ್ವಸಕ್ಕೆ ತೆಗೆದುಕೊಳ್ಳದೆ ಘಟಕ ನಿರ್ಮಾಣಕ್ಕಾಗಿ ಮೂಳೂರಿನ 1.78 ಎಕರೆ ಜಮೀನನ್ನು ತಾಲೂಕು ಆಡಳಿತ ಪುರಸಭೆಗೆ ದಿಢೀರ್ ಮಂಜೂರು ಮಾಡಿದೆ. ಕೃಷಿ ಸಹಿತ ಜನವಸತಿ ಪ್ರದೇಶವಾಗಿರುವ ಇಲ್ಲಿ ಎಸ್‌ಟಿಪಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಸತೀಶ್ಚಂದ್ರ ಮೂಳೂರು ಹಾಗೂ ಮೊಹಮ್ಮದ್ ಆಸೀಫ್ ಮಾತನಾಡಿ, ಈ ಭಾಗದ ಪುರಸಭಾ ಸದಸ್ಯರಾಗಿರುವ ನಮಗೆ ಘಟಕ ನಿರ್ಮಾಣ ಕುರಿತು ಮಾಹಿತಿ ನೀಡಿಲ್ಲ. ಜನಪ್ರತಿನಿಧಿಗಳು ಹಾಗೂ ಜನರನ್ನು ಕತ್ತಲಲ್ಲಿಟ್ಟು ಏಕಾಏಕಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ದೂರಿದರು.

ಗ್ರಾಮಸ್ಥ ಪ್ರಭಾತ್ ಶೆಟ್ಟಿ ಮೂಳೂರು ಮಾತನಾಡಿ, ಅವೈಜ್ಞಾನಿಕ ಘಟಕ ಈ ಪ್ರದೇಶಕ್ಕೆ ಸೂಕ್ತವಲ್ಲ. ಕಾಪು ಪೇಟೆಯ ಬೃಹತ್ ವಾಣಿಜ್ಯ ಹಾಗೂ ವಸತಿ ಸಂಕೀರ್ಣಗಳಲ್ಲಿ ಅವರೇ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸಿಕೊಳ್ಳಲಿ. ಆದರೆ ಪೇಟೆಯ ಹೊರಭಾಗದಲ್ಲಿರುವ ಮೂಳೂರಿನಲ್ಲಿ ಕೊಳಚೆ ನೀರು ಶುದ್ಧೀಕರಣಗೊಳಿಸುವುದು ಸೂಕ್ತವಲ್ಲ ಎಂದು ಆಕ್ಷೇಪಿಸಿದರು. ಚಿತ್ತನ್ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net