

ಮೂಡಿಗೆರೆ: ಲೋಕವಳ್ಳಿ ಗ್ರಾಮದಲ್ಲಿ ಒಬ್ಬರಿಗೆ ಮನೆ ನಿರ್ಮಿಸಿಕೊಳ್ಳಲು ಗ್ರಾಪಂ ನೀಡಿದ ನಿವೇಶನದಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಿಸಲು ಮುಂದಾಗಿದ್ದಾರೆ. ಚರ್ಚ್ ಕಾಮಗಾರಿ ತಡೆಯಬೇಕು ಎಂದು ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಡಾವಣೆಯ 3ನೇ ಅಡ್ಡರಸ್ತೆಯಲ್ಲಿ ಗ್ರಾಮದ ಒಬ್ಬರು 6 ತಿಂಗಳ ಹಿಂದೆ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಆರಂಭಿಸಿದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. 2 ತಿಂಗಳ ಹಿಂದೆ ಪುನಃ ಕಟ್ಟಡ ಕಾಮಗಾರಿ ಪ್ರಾರಂಭಿಸಿ ಚರ್ಚ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಗ್ರಾಪಂನಿಂದ ಪರವಾನಗಿ ಪಡೆದಿಲ್ಲ. ಅಧಿಕಾರಿಗಳು ಪರಿಶೀಲನೆ ನಡೆಸಿ ಈ ಕಟ್ಟಡ ಚರ್ಚ್ ಬಳಕೆಗಾಗಿದ್ದರೆ ಕೂಡಲೇ ಕಾಮಗಾರಿ ತಡೆಯಬೇಕು. ಗ್ರಾಮದೊಳಗೆ ಚರ್ಚ್ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಗ್ರಾಮಸ್ಥರಾದ ಲಕ್ಷ್ಮಣ ಪೂಜಾರಿ ಮತ್ತು ರಮೇಶ್ ಎಂಬುವವರು ಒತ್ತಾಯಿಸಿದರು. ಮೂಡಿಗೆರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.
ಹಳೇಮೂಡಿಗೆರೆ ಪಿಡಿಒ ಪ್ರಶಾಂತ್ ಸ್ಥಳ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, 1993ರಲ್ಲಿ ವಸತಿ ಯೋಜನೆಯಲ್ಲಿ ಗ್ರಾಮದ ಒಬ್ಬರಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ನಿವೇಶನವನ್ನು ಅವರು ಚಿಕ್ಕಮಗಳೂರು ತಾಲೂಕಿನ ಹಾಂದಿ ಗ್ರಾಮದ ಪ್ರವೀಣ್ ಎಂಬುವರಿಗೆ ಮಾರಾಟ ಮಾಡಿದ್ದಾರೆ. ಪ್ರವೀಣ್ ಕಟ್ಟಡ ನಿರ್ಮಿಸಿದ್ದಾರೆ. ಕಟ್ಟಡದಲ್ಲಿ ಚರ್ಚ್‌ಗೆ ಸಂಬಂಧಿಸಿದ ಯಾವುದೇ ಕುರುಹುಗಳು ಕಂಡುಬಂದಿಲ್ಲ. ಕಟ್ಟಡವನ್ನು ಭವನದಂತೆ ನಿರ್ಮಿಸಲಾಗಿದೆ. ಸ್ಥಳೀಯರ ವಿರೋಧದಿಂದಾಗಿ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.