

ಶಿರಸಿ: ಕಸ್ತೂರಿ ರಂಗನ್ ವರದಿ ಮರು ಅಧ್ಯಯನಕ್ಕೆ ಕೇಂದ್ರ ಸರ್ಕಾರವು ಸಮಿತಿ ರಚಿಸಿರುವ ಕ್ರಮ ಸರಿಯಲ್ಲ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಗುರುವಾರ ಈ ಕುರಿತಂತೆ ಕಾನೂನು ಸಚಿವ ಎಚ್. ಕೆ. ಪಾಟೀಲ ಅವರನ್ನು ಬೆಂಗಳೂರಿನ ಗೃಹ ಕಚೇರಿಯಲ್ಲಿ ನಿಯೋಗದೊಂದಿಗೆ ಭೇಟಿಯಾದ ವೇದಿಕೆ ಅಧ್ಯಕ್ಷ ರವೀಂದ್ರನಾಥ ನಾಯ್ಕ, ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿದರು. ರಾಜ್ಯದ 10 ಜಿಲ್ಲೆಯ 20,668 ಚ.ಕಿ.ಮೀ ವ್ಯಾಪ್ತಿಯಲ್ಲಿ ಅತಿ ಸೂಕ್ಷ್ಮ ಪ್ರದೇಶವೆಂದು ಕರಡು ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ವರದಿಯ ಸಾರಾಂಶದಿಂದ ಉಂಟಾಗುವ ಪರಿಣಾಮದ ಕುರಿತು ಈಗಾಗಲೇ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದೆ. ಆರನೇ ಕರಡು ಅಧಿಸೂಚನೆಯಲ್ಲಿ ಉಲ್ಲೇಖಿಸಿದ ಕ್ಷೇತ್ರದಲ್ಲಿನ 15,680 ಚ.ಕಿ.ಮೀ ಪ್ರದೇಶ ಈಗಾಗಲೇ ಅರಣ್ಯ ಸಂರಕ್ಷಣಾ ಕಾಯ್ದೆಯಂತೆ ವಿವಿಧ ಯೋಜನೆಯಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಅಲ್ಲದೆ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ವಾಸಿಸುವ ಅರಣ್ಯವಾಸಿಗಳ ಜೀವನ ಅತಂತ್ರವಾಗುವುದರಿಂದ ವರದಿ ತಿರಸ್ಕರಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು ಎಂದು ವಿವರಿಸಿದರು.
ಕೇಂದ್ರ ಪರಿಸರ ಸಚಿವಾಲಯ ರಚಿಸಿದ ಸಮಿತಿಯು ಪುನಃ ಸೂಕ್ಷ್ಮ ಪರಿಸರಕ್ಕೆ ಭೇಟಿ ನೀಡಿ ಸರ್ಕಾರದ ಜನಪ್ರತಿನಿಧಿಯೊಂದಿಗೆ ಚರ್ಚಿಸಿ ಅಧ್ಯಯನನೊಂದಿಗೆ ರಾಜ್ಯ ಸರ್ಕಾರದ ಮನವೂಲಿಸುವ ಕಾರ್ಯ ಮಾಡಲು ಉದ್ದೇಶಿಸಿದೆ. ಈಗಾಗಲೇ ಬೆಂಗಳೂರು ಚಲೋ ಕಾರ್ಯಕ್ರಮದಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಯತ್ನಿಸಲಾಗಿದೆ. ವರದಿ ತಿರಸ್ಕರಿಸಲು ಆಗ್ರಹಿಸಿ ಶೀಘ್ರದಲ್ಲಿಯೇ ದೆಹಲಿ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್.ಕೆ. ಪಾಟೀಲ ಅವರಿಗೆ ತಿಳಿಸಿದರು.
ಪ್ರಮುಖರಾದ ನಾಗಪತಿ ಗೌಡ ಹುಕ್ಕಳಿ, ಹರಿಹರ ನಾಯ್ಕ, ಸೀತಾರಾಮ ಗೌಡ, ಮಂಜುನಾಥ ನಾಯ್ಕ ಇತರರಿದ್ದರು.