10 ಶಾಸಕರ ಅಮಾನತ್ತಿಗೆ ವಿರೋಧ; ಸ್ಪೀಕರ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರ ಪ್ರತಿಭಟನೆ

22 smg 1
ಶಿವಮೊಗ್ಗದಲ್ಲಿ ಬಿಜೆಪಿ ಮುಖಂಡರು ಪ್ರತಿಭಟಿಸಿದರು. ಆರಗ ಜ್ಞಾನೇಂದ್ರ, ಕೆ.ಎಸ್.ಈಶ್ವರಪ್ಪ, ಎಸ್.ಎನ್.ಚನ್ನಬಸಪ್ಪ, ಟಿ.ಡಿ.ಮೇಘರಾಜ್, ಎಸ್.ಶಿವಕುಮಾರ್, ಲಕ್ಷ್ಮೀ ಶಂಕರನಾಯ್ಕ, ಟಿ.ಬಿ.ಜಗದೀಶ್, ಎಸ್.ದತ್ತಾತ್ರಿ, ಇ.ವಿಶ್ವಾಸ್, ಎಸ್. ಜ್ಞಾನೇಶ್ವರ್, ಮೋಹನ್ ರೆಡ್ಡಿ, ಶ್ರೀನಾಥ್ ಇದ್ದರು.
Published on

ಶಿವಮೊಗ್ಗ: ಸದನದಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ 10 ಶಾಸಕರನ್ನು ಅಮಾನತುಗೊಳಿಸಿದ ರಾಜ್ಯ ಸರ್ಕಾರ ಮತ್ತು ಸ್ಪೀಕರ್ ನಡೆ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಬೆಂಬಲಿತ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಶನಿವಾರ ಶಿವಮೊಗ್ಗದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಮಾಜಿ ಡಿಸಿಎಂ ಕೆೆ.ಎಸ್.ಈಶ್ವರಪ್ಪ, ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಶಿವಪ್ಪ ನಾಯಕ ವೃತ್ತ ಮತ್ತು ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಿ.ಎಸ್.ಅರುಣ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ಕಾರ್ಯಕರ್ತರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಕಿಡಿಕಾರಿದರು.
ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿರುವ ಯು.ಟಿ.ಖಾದರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಯಾವತ್ತಿನಿಂದಲೂ ಪ್ರಜಾಪ್ರಭುತ ವಿರೋಧಿ ನೀತಿ ಅನುಸರಿಸಿಕೊಂಡು ಬಂದಿದೆ. ಪ್ರಜಾಪ್ರಭುತ್ವ ಉಳಿಸುವ ಸಲುವಾಗಿ ಬಿಜೆಪಿ ಹೋರಾಟ ಮಾಡುತ್ತಿದೆ. ಇತ್ತೀಚೆಗೆ ವಿಧಾನಸಭೆಯಲ್ಲಿ ನಡೆದ ಘಟನೆಯಲ್ಲಿ ಪಕ್ಷದ ಋಣ ತೀರಿಸಲು ಸ್ಪೀಕರ್ ಬಿಜೆಪಿಯ 10 ಶಾಸಕರನ್ನು ಅಮಾನತು ಮಾಡಿದ್ದಾರೆ. ಅವರು ಆ ಸ್ಥಾನದಲ್ಲಿ ಒಂದು ಕ್ಷಣವೂ ಇರಕೂಡದು. ಆ ಜಾಗದಲ್ಲಿ ಕೂರಲು ಅವರು ನಾಲಾಯಕ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿ, ಮಾತೆತ್ತಿದರೆ ಕಾಂಗ್ರೆಸ್‌ನವರು ಅಂಬೇಡ್ಕರ್ ಮತ್ತು ಸಂವಿಧಾನ ಎಂದು ಹೇಳುತ್ತಾರೆ. ಐಎಎಸ್ ಅಧಿಕಾರಿಗಳನ್ನು ಯಾವ ಲೆಕ್ಕಾಚಾರದಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ಸ್ವಾಗತ ಮಾಡಲು ಕಳಿಸಿದರು ಎಂದು ಅವರು ಮೊದಲು ಉತ್ತರ ನೀಡಬೇಕು. ಇದಕ್ಕೆ ಕಾರಣರಾದ ಅಧಿಕಾರಿಗಳು ಖರ್ಚು ಭರಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಆರಗ ಜ್ನಾನೇಂದ್ರ ಮಾತನಾಡಿ, 20 ವರ್ಷ ನಾನು ಶಾಸಕನಾಗಿ ಕೆಲಸ ಮಾಡಿದ್ದೇನೆ. ಆದರೆ ಈ ತರಹದ ಸ್ಪೀಕರ್ ನೋಡಿಲ್ಲ. ಯು.ಟಿ.ಖಾದರ್ ಅವರಿಗೆ ತರಬೇತಿ ಅವಶ್ಯಕವಿದೆ. ವಿಮಾನ ನಿಲ್ದಾಣದಲ್ಲಿ ಯಾರನ್ನು ಐಎಎಸ್ ಅಧಿಕಾರಿಗಳು ಸ್ವಾಗತಿಸಬೇಕೆಂಬ ಬಗ್ಗೆ ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿ ಮದನಗೋಪಾಲ್ ವಿವರವಾಗಿ ಹೇಳಿದ್ದಾರೆ. ಇಲ್ಲಿ ಲೋಪ ಆಗಿರುವುದು ಎಲ್ಲರಿಗೂ ಗೊತ್ತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ ಮಾತನಾಡಿ, ದರ್ಪ-ದೌರ್ಜನ್ಯಕ್ಕೆ, ಸರ್ವಾಧಿಕಾರಿ ಧೋರಣೆಗೆ ಕಾಂಗ್ರೆಸ್ ಪರಂಪರೆಯೇ ಇದೆ. 2 ದಿನ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದು ಸ್ಪೀಕರ್ ಮಾಡಿರುವ ಅಪಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಪಕ್ಷಗಳ ಸಭೆ ನಡೆಸಿದ್ದಾರೆ. ಸಭೆ ನಡೆಸಿರುವುದಕ್ಕೆ ಯಾರ ತಕರಾರೂ ಇಲ್ಲ. ಭೋಜನ ಕೂಟಕ್ಕೆ ಸ್ಪೀಕರ್ ಹೋಗಿರುವುದಕ್ಕೆ ಆಕ್ಷೇಪ ಇದೆ. ಅಲ್ಲಿ ಬಂದಿದ್ದವರು ಪಕ್ಷಾತೀತ ಅಥಿತಿಗಳಲ್ಲ. ಸ್ಪೀಕರ್, ಶಾಸಕರು ರೀತಿ ಅಲ್ಲಿ ಹೋಗಿದ್ದು ಸರಿಯಲ್ಲ ಎಂದು ಕಿಡಿಕಾರಿದರು.
ಇದನ್ನೇ ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೆ ಮಾಡಲಾಗಿದೆ. ಆಗ ಉದ್ವೇಗದ ಸಮಯದಲ್ಲಿ ಸಣ್ಣಪುಟ್ಟ ಘಟನೆಗಳಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸಿಕ್ಕಿರುವ ಬಹುಮತದಿಂದ ಅಧಿಕಾರ ನೆತ್ತಿಗೆ ಏರಿದೆ. ಅವರು ಜಗತ್ತನ್ನೇ ಗೆದ್ದಂತೆ ಆಡುತ್ತಿದ್ದಾರೆ. ಇಂತಹ ದರ್ಪಗಳು ನಡೆಯುವುದಿಲ್ಲ ಎಂದರು.
ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿರುವ ಯು.ಟಿ.ಖಾದರ್ ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಶಾಸಕ ಎಸ್.ಎನ್.ಚನ್ನಬಸಪ್ಪ ಒತ್ತಾಯಿಸಿದರು. ಡಿಸಿ ಕಚೇರಿ ಎದುರು ಇದೇ ವಿಚಾರಕ್ಕೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಚುನಾಯಿತ ಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸಿದೆ ಎಂದು ಕಿಡಿಕಾರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ, ಬಿಜೆಪಿ ನಗರಾಧ್ಯಕ್ಷ ಟಿ.ಬಿ.ಜಗದೀಶ್, ಪ್ರಮುಖರಾದ ಎಸ್.ದತ್ತಾತ್ರಿ, ಇ.ವಿಶ್ವಾಸ್, ಎಸ್.ಜ್ಞಾನೇಶ್ವರ್, ಪ್ರಭಾಕರ್, ಮೋಹನ್ ರೆಡ್ಡಿ, ಶ್ರೀನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net