ಸರ್ಕಾರಿ ಶಾಲೆಗಳಲ್ಲಿ ಶಿಶು ಪಾಲನಾ ಕೇಂದ್ರ ಆರಂಭಕ್ಕೆ ವಿರೋಧ

JLR ph1 Sep 15 Protest-
Published on

ಜಗಳೂರು: ಅಂಗನವಾಡಿ ವ್ಯವಸ್ಥೆಗೆ ವಿರುದ್ಧವಾಗಿ ಶಿಶು ಪಾಲನಾ ಕೇಂದ್ರ ಮತ್ತು ಶಾಲಾಪೂರ್ವ ತರಗತಿ ಆರಂಭಿಸುವ ಚಿಂತನೆ ವಿರೋಧಿಸಿ ಶುಕ್ರವಾರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿನ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಹಳೆ ಮಹಾತ್ಮಗಾಂಧಿ ವೃತ್ತ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿ ತೆರಳಿ ಉಪ ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರ ಹೊರಡಿಸುವ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ನಡೆಸಲು ಸೌಲಭ್ಯ ಕಲ್ಪಿಸಬೇಕು. ಉಪಧನ ಪಡೆಯಲು ಕಾರ್ಯಕರ್ತೆಯರು, ಸಹಾಯಕಿಯರು ಅರ್ಹರು ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಕಳೆದ 48 ವರ್ಷಗಳಿಂದಲೂ ಹುಟ್ಟಿನಿಂದ 6ವರ್ಷ ವಯೋಮಾನದ ಮಕ್ಕಳ ಪಾಲನೆ, ಪೋಷಣೆ ಮಾಡಿದ್ದೇವೆ. ಅಂಗನವಾಡಿ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ ಅದಕ್ಕೆ ಪರ್ಯಾಯವಾಗಿ ಶಿಶು ಪಾಲನಾ ಕೇಂದ್ರ ಮತ್ತು ಶಾಲಾ ಪೂರ್ವ ತರಗತಿಗಳನ್ನು ಆರಂಭಿಸಿರುವ ಧೋರಣೆ ಸರಿಯಲ.್ಲ ಜಾರಿಗೊಳಿಸಿರುವ ಆದೇಶವನ್ನು ರದ್ದುಪಡಿಸಬೇಕು, ಅಂಗನವಾಡಿ ಕೇಂದ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಐಟಿಯುಸಿ ಅಧ್ಯಕ್ಷೆ ಟಿ.ಎಚ್ ಸುಶೀಲಮ್ಮ, ಗೌರವಾಧ್ಯಕ್ಷೆ ಎಚ್. ಭರಮಕ್ಕ, ಉಪಾಧ್ಯಕ್ಷರಾದ ಎಚ್.ಎನ್ ಶಾಂತವೀರಮ್ಮ, ಡಿ.ಟಿ. ಗೌರಮ್ಮ, ಪ್ರಧಾನ ಕಾರ್ಯದರ್ಶಿ ಮಹಮದ್ ಬಾಷಾ, ಎಸ್.ಎಂ ಗಿರಿಜಮ್ಮ, ವೈ. ಹಾಲಮ್ಮ, ಎಚ್. ಮಂಜಮ್ಮ, ಡಿ.ನಾಗರತ್ನಮ್ಮ ಸೇರಿದಂತೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net