

ಬಾಳೆಹೊನ್ನೂರು: ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆದ ಶೃಂಗೇರಿ ಕ್ಷೇತ್ರದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ತಿಂಗಳೊಳಗೆ ಸಚಿವರನ್ನು ಭೇಟಿ ಮಾಡಲು ನಿಯೋಗ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದ ಶಾಸಕರು ಹಾಗೂ ಸಂಸದರು ಇದುವರೆಗೂ ಕರೆದುಕೊಂಡು ಹೋಗಿಲ್ಲ. ಅ.17ರೊಳಗೆ ನೀಡಿದ ಭರವಸೆ ಈಡೇರದಿದ್ದಲ್ಲಿ ತೀವ್ರ ಪ್ರತಿಭಟನೆ ಮಾಡುವುದು ಹಾಗೂ ಸೆಕ್ಷನ್4ನ್ನು 17 ಮಾಡುವ ಪ್ರಕ್ರಿಯೆ ಕುರಿತು ತುರ್ತಾಗಿ ಜಿಲ್ಲಾಧಿಕಾರಿ ಭೇಟಿಯಾಗಿ ಮಾಹಿತಿ ಪಡೆಯುವ ಬಗ್ಗೆ ನಿರ್ಧರಿಸಲಾಯಿತು.
64ಎ ಕೇಸ್ ಆಗಿರುವ ಜಾಗಗಳಲ್ಲಿ ಸಾಗುವಳಿ ಮಾಡಿಕೊಂಡಿರುವ ರೈತರಿಗೆ ಅರಣ್ಯಾಧಿಕಾರಿಗಳು ಕಾಫಿ ಕೊಯ್ಲು ಆದ ನಂತರ ಜಾಗ ಬಿಟ್ಟು ಕೊಡುತ್ತೇವೆ ಎಂದು ಬರೆದುಕೊಡಿ ಎಂದು ಕೇಳುತ್ತಿದ್ದಾರೆ. ಇದನ್ನು ತಡೆಹಿಡಿಯಲು ಶಾಸಕರು, ಸಂಸದರನ್ನು ಒತ್ತಾಯಿಸುವುದು ಹಾಗೂ ತೆರವು ವಿರೋಧಿಸಿ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಯಿತು.
ಭದ್ರಾಅಭಯಾರಣ್ಯ ವ್ಯಾಪ್ತಿಯಲ್ಲಿ ಆನೆ ಬಿಡಾರ ನಿರ್ಮಾಣ ವಿರೋಧಿಸಿ ಹೋರಾಟ ನಡೆಸಲು, ಒತ್ತುವರಿ ಸಮಸ್ಯೆ ಪರಿಹಾರದ ವರೆಗೆ ಎಸಿಎ್ ಕೋರ್ಟ್‌ನಲ್ಲಿ ಹೊಸ ಪ್ರಕರಣ ದಾಖಲಿಸಲು ತಡೆ ಹಿಡಿಯುವುದು, ಶಾಲಾ ಮಕ್ಕಳಿಂದ ಪ್ರಧಾನಿಗೆ ಪತ್ರ ಬರೆಯುವ ಅಭಿಯಾನ, ಶಾಸಕರು, ಸಂಸದರು ಹಾಗೂ ವಿಧಾನ ಪರಿಷ್‌ತ್ ಶಾಸಕರನ್ನು ಒಂದೇ ಕಡೆ ಸೇರಿಸಿ ಚರ್ಚಿಸಲು ನಿರ್ಣಯ ಕೈಗೊಳ್ಳಲಾಯಿತು.
ಮಲೆನಾಡು ನಾಗರೀಕ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್, ರಂಜಿತ್ ಶೃಂಗೇರಿ, ಕಾರ್ತಿಕ್ ಕಾರ್‌ಗದ್ದೆ, ನವೀನ್ ಕರಗಣೆ, ಪುರುಷೋತ್ತಮ್, ಹಿರಿಯಣ್ಣ, ಆದರ್ಶ ವಕೀಲ ರವೀಂದ್ರ ಕೆಸುವಿನಮನೆ, ರತ್ನಾಕರ್ ಗಡಿಗೇಶ್ವರ, ಖಾಂಡ್ಯದ ಚಂದ್ರಶೇಖರ್ ರೈ ಮತ್ತಿತರರಿದ್ದರು.