ಶರಾವತಿ ಸ್ಟೋರೇಜ್ ವಿದ್ಯುತ್ ಯೋಜನೆಗೆ ವಿರೋಧ

Published on

ಕುಮಟಾ: ಪರಿಸರಕ್ಕೆ ಮಾರಕ ಹಾಗೂ ಜನಜೀವನಕ್ಕೆ ತೊಂದರೆದಾಯಕವಾದ ಶರಾವತಿ ಸ್ಟೋರೇಜ್ ವಿದ್ಯುತ್ ಯೋಜನೆ ಅನುಷ್ಠಾನ ಬೇಡ ಎಂದು ಉತ್ತರ ಕನ್ನಡ ಉಳಿಸಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ.ಜಿ.ಭಟ್ ತಿಳಿಸಿದ್ದಾರೆ.

ಪರಿಸರ ಮಾರಕ ಯೋಜನೆಗಳಿಗೆ ಉತ್ತರ ಕನ್ನಡ ಜಿಲ್ಲೆಯೇ ಪ್ರಯೋಗಶಾಲೆ ಎಂಬಂತಾಗಿದ್ದು ಭವಿಷ್ಯದಲಿ ಅಪಾಯವಿದೆ. ಯೋಜಿತ ಶರಾವತಿ ವಿದ್ಯುತ್ ಯೋಜನೆಗೆ ಸುಮಾರು 16000 ಮರಗಳ ಮಾರಣಹೋಮ ಮಾಡಿ ಜಲವಿದ್ಯುತ್ ಯೋಜನೆ ಮಾಡುವ ಅವಶ್ಯಕತೆ ಇಲ್ಲ. ಒಂದೇ ಒಂದು ಗಿಡವನ್ನು ಕತ್ತರಿಸುವ ಪರಿಸ್ಥಿತಿಯಲ್ಲಿ ನಾವಿಲ್ಲ. ಪರಿಸರ ನಾಶದಿಂದಾಗಿಯೇ ಜಾಗತಿಕ ಉಷ್ಣತೆ ಹೆಚ್ಚಿದೆ. ಆಮ್ಲಜನಕ ಕಡಿಮೆಯಾಗಿ ವಾತಾವರಣ ಕಲುಷಿತವಾಗಿದೆ. ಬೇರೆ ಬೇರೆ ರೀತಿಯ ಚರ್ಮರೋಗಗಳು, ಶ್ವಾಸಕೋಶ ಸಂಬಂಧಿ ರೋಗಗಳು ಪರಿಸರ ನಾಶದಿಂದಾಗಿ ಬರುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಸಮೃದ್ಧವಾಗಿ ಬೆಳೆದ 16 ಸಾವಿರ ಮರಗಳನ್ನು ಕಡಿಯುವುದೆಂದರೆ ನಿಜಕ್ಕೂ ಜನರಿಗೆ ಗಲ್ಲು ಶಿಕ್ಷೆ ವಿಧಿಸಿದಂತೆಯೇ ಸರಿ.

ಸರ್ಕಾರ ಹಾಗೂ ಅಧಿಕಾರಿಗಳು ಸಾವಿರಾರು ಕೋಟಿಯ ಯೋಜನೆ ತಂದು ಕಮಿಷನ್ ಹೊಡೆದು ಸ್ವಾರ್ಥಕ್ಕಾಗಿ ಜಿಲ್ಲೆಯ ಜನತೆಯ ಭವಿಷ್ಯ ಬಲಿಕೊಡುವ ಹುನ್ನಾರ ಇದಾಗಿದೆ. ಯಾವುದೇ ಕಾರಣಕ್ಕೂ ಉತ್ತರ ಕನ್ನಡ ಜಿಲ್ಲೆಯ ಜನ ಯೋಜಿತ ಶರಾವತಿ ಯೋಜನೆಗೆ ಅವಕಾಶ ಕೊಡುವುದಿಲ್ಲ. ಇಲ್ಲಿ ತಯಾರಿಸಿದ ವಿದ್ಯುತ್ತನ್ನು ಇನ್ಯಾರಿಗೋ ಮಾರುವುದಕ್ಕೆ ಹುನ್ನಾರ ನಡೆಸಲು ಬಿಡುವುದಿಲ್ಲ. ತಕ್ಷಣ ಯೋಜನೆಯನ್ನು ಕೈ ಬಿಡಬೇಕು. ಪ್ರವಾಸೋದ್ಯಮ ಜಿಲ್ಲೆಯಾಗಿ ಪರಿವರ್ತನೆಯಾಗುತ್ತಿರುವ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸೋದ್ಯಮ ಪೂರಕ ಯೋಜನೆಗಳನ್ನು ಕೊಡಬೇಕು. ಇಲ್ಲದಿದ್ದರೆ ಇಡೀ ಜಿಲ್ಲೆಯ ಜನ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net