ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ವಿರೋಧ: ದ್ವಾರಕನಗರ ನಿವಾಸಿಗಳಿಂದ ಮನವಿ ಸಲ್ಲಿಕೆ

Opposition to setting up power substation Mandya
Published on

ಮಂಡ್ಯ: ತಾಲೂಕಿನ ಬೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ್ವಾರಕನಗರದಲ್ಲಿ ಉದ್ಯಾನಕ್ಕೆ ಮೀಸಲಾದ ಜಾಗದಲ್ಲಿ ವಿದ್ಯುತ್ ಉಪ ಕೇಂದ್ರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಸ್ಥಳೀಯ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ.

ದ್ವಾರಕನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ಸದಸ್ಯರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ಡಾ.ಸಿ.ಆರ್.ರೋಹಿಣಿ, ಜಿ.ಪಂ ಕಚೇರಿಯಲ್ಲಿ ಉಪ ಕಾರ್ಯದರ್ಶಿ-2 ಪಿ.ಲಕ್ಷ್ಮೀ, ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡರ ಕಚೇರಿಗೆ ತೆರಳಿ ಆಪ್ತ ಕಾರ್ಯದರ್ಶಿ ಹಾಗೂ ಬೇಲೂರು ಗ್ರಾಪಂ ಪಿಡಿಒ ಸಿದ್ದರಾಜು ಅವರಿಗೆ ಮನವಿ ಸಲ್ಲಿಸಿ, ಉಪ ಕೇಂದ್ರ ಸ್ಥಾಪನೆಗೆ ಅವಕಾಶ ನೀಡಬಾರದೆಂದು ಆಗ್ರಹಿಸಿದರು.

ದ್ವಾರಕನಗರದಲ್ಲಿ ಹಾದು ಹೋಗಿರುವ 66 ಕೆವಿ ವಿದ್ಯುತ್ ಮಾರ್ಗದ ಕೆಳಗಿನ ಪ್ರದೇಶವನ್ನು ಉದ್ಯಾನಕ್ಕೆಂದು ಮೀಸಲಿಡಲಾಗಿದೆ. ಬಡಾವಣೆಯ ಮಕ್ಕಳು ಆಟವಾಡಲು ಮತ್ತು ಸಮುದಾಯದ ಕಾರ್ಯಕ್ರಮಕ್ಕೆ ಸದ್ಭಳಕೆಯಾಗುತ್ತಿದೆ. ಆದರೀಗ ವಿದ್ಯುತ್ ಉಪ ಕೇಂದ್ರ ಸ್ಥಾಪನೆಗಾಗಿ ಕೋರಿ ಜಿ.ಪಂ ಸಿಇಒಗೆ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಉದ್ಯಾನದ ಜಾಗವನ್ನು ಸಿಎ/ಮೈದಾನ ಎಂದು ನಮೂದಿಸಿದ್ದಾರೆ. ವಾಸ್ತವವಾಗಿ ಇದು ಸಿಎ ನಿವೇಶನ ಅಥವಾ ಬೇರಾವುದೇ ಮೈದಾನ ಆಗಿರುವುದಿಲ್ಲ. ಬಡಾವಣೆ ರಚನೆಯ ವಿನ್ಯಾಸ ನಕ್ಷೆಯಲ್ಲೂ ಉದ್ಯಾನ ಎಂದೇ ಗುರುತಿಸಲಾಗಿದೆ. ಆದ್ದರಿಂದ ಉದ್ಯಾನದ ಜಾಗವನ್ನು ಅನ್ಯ ಉದ್ದೇಶಕ್ಕೆ ನೀಡಬಾರದು. ಒಂದೊಮ್ಮೆ ನಮ್ಮ ಮನವಿಯನ್ನು ತಿರಸ್ಕರಿಸಿ ಅನ್ಯ ಉದ್ದೇಶಕ್ಕೆ ನೀಡಿದರೆ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಂತೆಯೇ ದ್ವಾರಕನಗರ ನಿವಾಸಿಗಳು ಪ್ರತಿ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಲು 2 ರಿಂದ 3ಕಿ.ಮೀ. ದೂರದ ನೆರೆಯ ಕಾರಸವಾಡಿ ಗ್ರಾಮಕ್ಕೆ ಹೋಗಬೇಕಿದೆ. ಹೀಗಾಗಿ ನಮ್ಮ ಬಡಾವಣೆಯಲ್ಲೇ ಮತದಾನ ಮಾಡಲು ಕೊಠಡಿ ನಿರ್ಮಿಸಬೇಕು. ಮಕ್ಕಳಿಗಾಗಿ ಬಡಾವಣೆಯಲ್ಲೇ ಅಂಗನವಾಡಿ ಕೇಂದ್ರವನ್ನು ಸ್ಥಾಪಿಸಬೇಕು. ಈ ಅಂಗನವಾಡಿ ಕೇಂದ್ರದಲ್ಲೇ ಚುನಾವಣಾ ಸಂದರ್ಭದಲ್ಲಿ ಮತದಾನ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಎಚ್.ಎಂ.ಬಸವರಾಜು, ಕಾರ್ಯದರ್ಶಿ ಎ.ಎಂ.ಸಂದೇಶ್, ಸದಸ್ಯರಾದ ಜಯರಾಂ, ಪುಟ್ಟಸ್ವಾಮಿ, ಚಲುವಯ್ಯ, ನವೀನ್ ಚಿಕ್ಕಮಂಡ್ಯ, ಚಂದ್ರೇಗೌಡ, ಸಿದ್ದಯ್ಯ, ಜಯರಾಮು, ಬಾಲಾಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net