ಸಿಎನ್‌ಜಿ ಘಟಕ ಸ್ಥಾಪನೆಗೆ ವಿರೋಧ

ಕೂಡುಮಂಗಳೂರು ಗ್ರಾಪಂ ಸಾಮಾನ್ಯ ಸಭೆಯು ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸದಸ್ಯರು, ಅಧಿಕಾರಿಗಳು ಹಾಜರಿದ್ದರು.
ಕೂಡುಮಂಗಳೂರು ಗ್ರಾಪಂ ಸಾಮಾನ್ಯ ಸಭೆಯು ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸದಸ್ಯರು, ಅಧಿಕಾರಿಗಳು ಹಾಜರಿದ್ದರು.
Published on

ಕುಶಾಲನಗರ: ಕೂಡುಮಂಗಳೂರು ಗ್ರಾಪಂ ಸಾಮಾನ್ಯ ಸಭೆಯು ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸಭೆಯ ಪ್ರಾರಂಭದಲ್ಲಿ ಜಮಾ, ಖರ್ಚಿನ ಬಗ್ಗೆ ಚರ್ಚೆ ನಡೆಯಿತು. ಕಾವೇರಿ ನದಿಯಲ್ಲಿ ನೀರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ದಂಡೆಯಲ್ಲಿರುವವರು ಸುರಕ್ಷಿತವಾಗಿರುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಸಿಎನ್‌ಜಿ ಘಟಕ ಸ್ಥಾಪನೆಯಾಗುತ್ತಿದ್ದು, ಪಕ್ಕದ ನವಗ್ರಾಮದಲ್ಲಿ ನೂರಾರು ಜನರು ವಾಸಿಸುತ್ತಿದ್ದಾರೆ. ಘಟಕದಿಂದ ಅನಾಹುತ ಸಂಭವಿಸುವ ಸಾಧ್ಯತೆಯಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಘಟಕ ಸ್ಥಾಪನೆ ವಿರುದ್ಧ ಸಂಬಂಧಪಟ್ಟ ಇಲಾಖೆಯವರಿಗೆ ಪತ್ರ ವ್ಯವಹಾರ ನಡೆಸಬೇಕು ಎಂದು ಸದಸ್ಯ ಕೆ.ಬಿ.ಶಂಶುದ್ದೀನ್ ಒತ್ತಾಯಿಸಿದರು. ಇದಕ್ಕೆ ಸದಸ್ಯರಾದ ಫಿಲೋಮಿನಾ, ಬೋಗಪ್ಪ ಸೇರಿದಂತೆ ಇನ್ನುಳಿದ ಸದಸ್ಯರು ಧ್ವನಿಗೂಡಿಸಿದರು.

15 ನೇ ಹಣಕಾಸಿನ ಕ್ರಿಯಾಯೋಜನೆಗೆ ಹಾಗೂ 2024 ಹಾಗೂ 15 ನೇ ಸಾಲಿನ ವರ್ಗ 1ರ ಕ್ರಿಯಾಯೋಜನೆಗೆ ಕಾಮಗಾರಿಗಳನ್ನು ನೀಡುವಂತೆ ಪಿಡಿಒ ಸಂತೋಷ್ ತಿಳಿಸಿದರು. ಶೇ.25ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಾಂಗದವರಿಗೆ ಹೊಲಿಗೆ ಯಂತ್ರ ನೀಡಲು ತೀರ್ಮಾನ ಕೈಗೊಳ್ಳಲಾಯಿತು. ಶೇ.5ರ ಅನುದಾನದಲ್ಲಿ ವಿಶೇಷಚೇತನರ ಮನೆ ಮುಂಭಾಗ ಸೋಲಾರ್ ಲೈಟ್ ಅಳವಡಿಸಲು ತೀರ್ಮಾನ ಕೈಗೊಳ್ಳಲಾಯಿತು.
ಪಂಚಾಯಿತಿಯ ನಿವೇಶನದ ಬಗ್ಗೆ ಹಾಗೂ ಚಿಕ್ಕತ್ತೂರಿನಲ್ಲಿ ನಿವೇಶನ ರಹಿತರಿಗೆ ನೀಡಲು ಮೀಸಲಿಟ್ಟಿರುವ ಜಾಗದ ಬಗ್ಗೆ ಸಭೆಗೆ ಮಾಹಿತಿ ನೀಡುವಂತೆ ಸದಸ್ಯ ಕೆ.ಬಿ.ಶಂಶುದ್ದೀನ್ ಒತ್ತಾಯಿಸಿದರು. ಈ ಸಂಬಂಧ ಪಿಡಿಒ ಸಂತೋಷ್ ಪೂರಕವಾದ ಮಾಹಿತಿ ನೀಡಿದರು. ಬೀದಿ ನಾಯಿಗಳ ಸಮಸ್ಯೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು.

ಶೇ.25ರ ಅನುದಾನದಡಿ ಪ.ಜಾತಿ ಹಾಗೂ ಪಂಗಡದವರಿಗೆ ನೀಡುವ ಅಂತ್ಯ ಸಂಸ್ಕಾರದ ಹಣವನ್ನು ಶೀಘ್ರ ನೀಡುವಂತೆ ಸದಸ್ಯರು ಒತ್ತಾಯಿಸಿದರು. ನಂತರ ಸಾರ್ವಜನಿಕರ ಅರ್ಜಿ ವಿಲೇವಾರಿ ನಡೆಯಿತು. ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ವಿಷಯಗಳ ಚರ್ಚೆ ನಡೆಯಿತು. ಈ ಸಂದರ್ಭ ಪಂಚಾಯಿತಿ ಸದಸ್ಯರು, ಬಿಲ್ ಕಲೆಕ್ಟರ್ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net