

ಅವಿನಾಶ್ ಜೈನಹಳ್ಳಿ ಮೈಸೂರು
ನಗರದ ಸಬರ್ಬನ್ ಬಸ್(ಗ್ರಾಮಾಂತರ) ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರಿಸುವ ಸರ್ಕಾರದ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದರ ವಿರುದ್ಧ ಹೋರಾಟ ರೂಪಿಸಲು ಸಬರ್ಬನ್ ಬಸ್ ನಿಲ್ದಾಣ ಉಳಿಸಿ ಹೋರಾಟ ಸಮಿತಿ ಮುಂದಾಗಿದೆ.
ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಈಗಾಗಲೇ 120 ಕೋಟಿ ರೂ. ಮೊತ್ತದ ಯೋಜನೆ ರೂಪಿಸಿ ಸರ್ಕಾರದ ಅನುಮೋದನೆ ಸಹ ಪಡೆಯಲಾಗಿದೆ. ಬಸ್ ನಿಲ್ದಾಣ ಸ್ಥಳಾಂತರವಾದರೆ ನಗರದ ಹೃದಯ ಭಾಗದಲ್ಲಿರುವ ವರ್ತಕರು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ನಗರದ ಬಹುತೇಕ ಪ್ರವಾಸಿ ತಾಣಗಳು ನಗರದ ಹೃದಯ ಭಾಗದಲ್ಲಿದ್ದು, ಬಸ್ ನಿಲ್ದಾಣ ಸ್ಥಳಾಂತರದಿಂದ ಪ್ರವಾಸಿಗರಿಗೂ ಸಮಸ್ಯೆ ಎದುರಾಗಲಿದ್ದು, ಯೋಜನೆ ಕೈ ಬಿಡಬೇಕು ಎಂಬ ಒತ್ತಾಯ ಜೋರಾಗಿದೆ.
ಬಸ್ ನಿಲ್ದಾಣ ಸ್ಥಳಾಂತರಿಸಿದರೆ ವ್ಯಾಪಾರ, ವಹಿವಾಟು ನಷ್ಟವಾಗುತ್ತದೆ, ಪ್ರವಾಸಿಗರಿಗೂ ತೊಂದರೆಯಾಗುತ್ತದೆ. ಬಸ್ ನಿಲ್ದಾಣದ ಸಮೀಪ ನಾನಾ ವ್ಯಾಪಾರ ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ ಎಂಬ ಆತಂಕವೂ ಅವರಲ್ಲಿದೆ.
ಸಬರ್ಬನ್ ಬಸ್ ನಿಲ್ದಾಣ ಮೈಸೂರಿನ ನಗರಕ್ಕೆ ಒಂದು ರೀತಿ ಕಳಸ ಪ್ರಾಯದಂತೆ ಹೃದಯ ಭಾಗದಲ್ಲಿದೆ. ನಗರದ ಮಧ್ಯಭಾಗದಲ್ಲಿ 1984ರಲ್ಲಿ ಗ್ರಾಮಾಂತರ ಬಸ್ ನಿಲ್ದಾಣ ನಿರ್ಮಾಣವಾಯಿತು. ಅಲ್ಲಿಂದ ಇಲ್ಲಿಯವರೆಗೆ ಉತ್ತಮವಾಗಿ ನಡೆದುಕೊಂಡು ಬರುತ್ತಿದೆ. ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರದಿಂದ ದೊಡ್ಡ ಪ್ರಮಾಣದಲ್ಲಿ ಟ್ರಾಫಿಕ್ ಸಮಸ್ಯೆಯೇನು ಉಂಟಾಗುತ್ತಿಲ್ಲ. ಬೆಂಗಳೂರಿಗೆ ಹೋಲಿಸಿದರೆ ಮೈಸೂರು ನಗರ ದೊಡ್ಡ ಪ್ರಮಾಣದಲ್ಲಿ ಏನು ಬೆಳೆದಿಲ್ಲ. ಹೀಗಾಗಿ ಬೆಂಗಳೂರು ಮಾದರಿಯಲ್ಲಿ ಗ್ರಾಮಾಂತರ ಬಸ್ ನಿಲ್ದಾಣವನ್ನು ನಗರದ ಹೊರ ವಲಯಕ್ಕೆ ಸ್ಥಳಾಂತರಿಸುವುದು ವೈಜ್ಞಾನಿಕವಾದ ಕ್ರಮವಲ್ಲ.
ನಗರದಲ್ಲಿ ಜನಸಂಖ್ಯೆ ಇರುವುದು 12 ಲಕ್ಷ ಮಾತ್ರ. ಬೃಹತ್ ಮಹಾನಗರ ಪಾಲಿಕೆ ಮಾಡಿದರೂ ಜನಸಂಖ್ಯೆ 15 ಲಕ್ಷಕ್ಕೆ ಮಾತ್ರ ಏರಿಕೆಯಾಗಲಿದೆ. ಬೆಂಗಳೂರು ನಗರದ ಜನಸಂಖ್ಯೆ 1.25 ಕೋಟಿ ಇದೆ. ಬೆಂಗಳೂರಿನಲ್ಲಿ 495 ವಿಮಾನಗಳು ಸಂಚರಿಸುತ್ತಿದ್ದು, ನಮ್ಮಲ್ಲಿ ಕೇವಲ 2 ವಿಮಾನಗಳು ಸಂಚರಿಸುತ್ತಿವೆ. ಮೈಸೂರಿನಲ್ಲಿ 18 ರೈಲುಗಳು, ಬೆಂಗಳೂರಿನಲ್ಲಿ 367 ರೈಲುಗಳು ಸಂಚರಿಸುತ್ತಿವೆ. ಬೆಂಗಳೂರು ನಗರಕ್ಕೆ ಪ್ರತಿದಿನ ಬಂದು ಹೋಗುವವರು 25 ಲಕ್ಷ ಜನರಿದ್ದು, ಮೈಸೂರಿಗೆ ಬಂದು ಹೋಗುವವರು 50 ಸಾವಿರ ಜನರು ಮಾತ್ರ. ವಾರಾಂತ್ಯದಲ್ಲಿ 1 ರಿಂದ 1.25 ಲಕ್ಷ ಜನರು ಮಾತ್ರ ಬಂದು ಹೋಗುತ್ತಾರೆ. ಹೀಗಾಗಿ ನಗರದ ಮೇಲೆ ಹೆಚ್ಚಿನ ವಾಹನ ದಟ್ಟಣೆಯ ಒತ್ತಡ ಕಂಡು ಬರುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಗ್ರಾಮಾಂತರ ಬಸ್ ನಿಲ್ದಾಣ ಸ್ಥಳಾಂತರಿಸುವ ಅವಶ್ಯಕತೆ ಏನಿದೆ? ಸರ್ಕಾರಕ್ಕೆ ಈ ಕುರಿತು ಸರಿಯಾದ ಮಾಹಿತಿ ನೀಡಿ ಸ್ಥಳಾಂತರ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ದಸರಾ ಸಂದರ್ಭದಲ್ಲಿ ಮಾತ್ರ ಒಂದಷ್ಟು ಜನ ದಟ್ಟಣೆಯಾಗುತ್ತದೆಯೇ ಹೊರತು ಉಳಿದ ಸಮಯದಲ್ಲಿ ಏನೂ ಸಮಸ್ಯೆ ಆಗುವುದಿಲ್ಲ. ಬನ್ನಿಮಂಟಪಕ್ಕೆ ಸ್ಥಳಾಂತರ ಮಾಡುವ ಬದಲು ಪಕ್ಕದಲ್ಲೇ ಇರುವ ಪೀಪಲ್ಸ್ ಪಾರ್ಕ್ ಮತ್ತು ಸರ್ಕಾರಿ ಗೆಸ್ಟ್ ಹೌಸ್ ಆವರಣದಲ್ಲಿ ಸ್ವಲ್ಪ ಜಾಗವನ್ನು ಪಡೆದು ವಿಸ್ತರಣೆ ಮಾಡಬಹುದು. ಈ ಮೂಲಕ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು ಎಂದು ವ್ಯಾಪಾರಿಗಳು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಿದ್ದಾರೆ.
ಬನ್ನಿಮಂಟಪದಲ್ಲಿರುವ ಸಾರಿಗೆ ಸಂಸ್ಥೆ ಡಿಪೋ ಸಮೀಪ ಕೆಎಸ್‌ಆರ್‌ಟಿಸಿಗೆ ಸೇರಿದ ಜಾಗವಿದ್ದು, ಅದರಲ್ಲಿ ನೆಲ್ಸನ್ ಮಂಡೇಲಾ ರಸ್ತೆಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಹೊಸದಾಗಿ ಗ್ರಾಮಾಂತರ ಬಸ್ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಬಸ್ ಡಿಪೋ ಬಳಿ 14 ಎಕರೆ ಜಾಗದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಿಸಲು ಡಿಪಿಆರ್ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ದೊರೆತಿದೆ.
ಕೇವಲ 4 ಎಕರೆ ಜಾಗದಲ್ಲಿ ನಿರ್ಮಿಸಿರುವ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪ್ರತಿದಿನ 2600ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತಿವೆ. ಇದರಿಂದ ಬಸ್ ನಿಲ್ದಾಣದಲ್ಲಿ ಬಸ್‌ಗಳ ನಿಲುಗಡೆಗೂ ಕಷ್ಟವಾಗುತ್ತಿರುವುದನ್ನು ಮನಗಂಡು ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.
ಸಬರ್ಬನ್ ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರಿಸಿದರೆ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತದೆ. ಸಿಟಿ ಸೆಂಟರ್‌ನಲ್ಲಿರುವುದರಿಂದ ಎಲ್ಲದಕ್ಕೂ ಅನುಕೂಲವಾಗಿದೆ. ಈಗ ಸಬರ್ಬನ್ ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರಿಸಿದರೆ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ನಾರಾಯಣಗೌಡ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ