

ಬೆಳಗಾವಿ: ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕೆ ಉದ್ದೇಶಕ್ಕಾಗಿ ನೀರು ತೆಗೆದುಕೊಂಡು ಹೋಗುವುದಕ್ಕೆ ನನ್ನ ವಿರೋಧವಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಸ್ಪಷ್ಟೀಕರಣ ಕೊಡಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಆಗ್ರಹಿಸಿದರು.
ನಗರದಲ್ಲಿ ಬಧುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಡಕಲ್‌ನಿಂದ ಧಾರವಾಡ ಕೈಗಾರಿಕೆಗಳಿಗೆ ಯಾವ ಹಿನ್ನೆಲೆಯಲ್ಲಿ ನೀರು ಕೊಡಲಾಗುತ್ತಿದೆ? ಎಷ್ಟು ನೀರು ಕೊಡಲಾಗುತ್ತಿದೆ. ಈ ಯೋಜನೆ ಅನುಮತಿ ಕೊಟ್ಟವರು ಯಾರು? ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಸ್ಪಷ್ಟೀಕರಣ ಕೊಡಬೇಕು. ಸ್ಪಷ್ಟೀಕರಣ ನೀಡದ್ದಕ್ಕೆ ಜನರಲ್ಲಿ ಗೊಂದಲ ಉಂಟಾಗಿದೆ ಎಂದರು.
ಬೆಳಗಾವಿ ಹಿತಾಸಕ್ತಿ ಕಾಪಾಡುವೆ:
ಕೈಗಾರಿಕೆ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಈ ಯೋಜನೆಗೆ ಪರ-ವಿರೋಧ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಜಲಾಶಯದಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಸಂಗ್ರಹವಿದ್ದರೆ, ಕೈಗಾರಿಕೆಗಳಿಗೆ ಕೊಡಲು ಅಭ್ಯಂತರವಿಲ್ಲ. ಆದರೆ, ನಮಗೆ ಕಡಿಮೆ ನೀರು ಅಲಭ್ಯ ಇರುವಾಗ ಬೇರೆಯವರಿಗೆ ಕೊಡುವುದನ್ನು ವಿರೋಧಿಸುತ್ತೇನೆ. ಹಿಡಕಲ್ ಜಲಾಶಯದ ನೀರಿಗಾಗಿ ಹೋರಾಟ ನಡೆಯುತ್ತಿದ್ದರೂ ಜಿಲ್ಲೆಯ ಹೆಚ್ಚಿನ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ. ನಾನು ಬೆಳಗಾವಿ ಕ್ಷೇತ್ರದಿಂದ ಸಂಸದನಾಗಿ ಆಯ್ಕೆಯಾಗಿದ್ದೇನೆ. ಹಾಗಾಗಿ ಬೆಳಗಾವಿ ಹಿತಾಸಕ್ತಿ ಕಾಪಾಡುತ್ತೇನೆ. ನಾವು ತೊಂದರೆಗೆ ಸಿಲುಕಿ, ಬೇರೆಯವರಿಗೆ ನೀರು ಕೊಡಲು ಬಿಡುವುದಿಲ್ಲ. ಈ ಯೋಜನೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಜತೆಗೆ ಸಮಾಲೋಚನೆ ಮಾಡುತ್ತೇನೆ. ಇದು ನನ್ನ ಸ್ಪಷ್ಟ ನಿಲುವು ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಸ್ಥಿತಿ ಚಿಂತಾಜನಕ:
ರಾಜ್ಯ ಸರ್ಕಾರದ ಪರಿಸ್ಥಿತಿ ಈಗ ಚಿಂತಾಜನಕವಾಗಿದೆ. ಗುತ್ತಿಗೆದಾರರ 60 ಸಾವಿರ ಕೋಟಿ ರೂ.ಬಿಲ್ ಪಾವತಿ ಬಾಕಿ ಇದೆ. ಗ್ಯಾರಂಟಿ ಯೋಜನೆ ನಿಭಾಯಿಸಲು ಮತ್ತು ಸ್ಥಗಿತಗೊಳಿಸಲು ಕಾಂಗ್ರೆಸ್ ಸರ್ಕಾರಕ್ಕೆ ಆಗುತ್ತಿಲ್ಲ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರಿ ನೌಕರಿಗೆ ಸಕಾಲಕ್ಕೆ ಸಂಬಳ ಕೊಡುವ ಪರಿಸ್ಥಿತಿಯೂ ಈಗ ಇಲ್ಲ. ಈ ಮಧ್ಯೆ ರಾಜ್ಯದ 8 ವಿಶ್ವವಿದ್ಯಾಲಯಗಳನ್ನು ಸರ್ಕಾರ ಮುಚ್ಚುವ ನಿರ್ಧಾರ ಕೈಗೊಂಡಿದೆ ಎಂದು ದೂರಿದರು.
ಅಧಿಕಾರಕ್ಕಾಗಿ ಕಿತ್ತಾಟ:
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ದಿನ ಬೆಳಗಾದರೆ, ಸಿಎಂ ಬದಲಾವಣೆ ಬಗ್ಗೆಯೇ ಚರ್ಚೆಯಾಗುತ್ತಿವೆ. ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ಜೋರಾಗಿದೆ. ಡಿ.ಕೆ.ಶಿವಕುಮಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಸಚಿವರೇ ನೇರವಾಗಿ ಆರೋಪಿಸಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿಯಾಗಿ ನಾನು ದಿ.ದೇವರಾಜ ಅರಸು ಅವರ ದಾಖಲೆ ಮುರಿಯಬೇಕು ಎಂದು ಸಿದ್ದರಾಮಯ್ಯ ಕುಳಿತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ. 78 ವರ್ಷದ ಸಿದ್ದರಾಮಯ್ಯ ಅವರಿಗೆ ಮತ್ತೆ ಹೊಸ ಹುಮ್ಮಸ್ಸು ಬಂದಿದೆ ಎಂದರು.