

ಸಕಲೇಶಪುರ: ಪುರಸಭೆ ವ್ಯಾಪ್ತಿಯ ಆಸ್ತಿಗಳ ಮೇಲೆ ಶೇ.3 ರಿಂದ 5ರಷ್ಟು ತೆರಿಗೆ ಹೆಚ್ಚಳ ಮಾಡುವುದಕ್ಕೆ ಸದಸ್ಯ ಆದರ್ಶ್ ಆಕ್ಷೇಪವ್ಯಕ್ತಪಡಿಸಿದರು.
ಪುರಸಭೆ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಸರ್ಕಾರದ ನಿರ್ದೇಶನದಂತೆ ಪುರಸಭೆ ವ್ಯಾಪ್ತಿಯಲ್ಲಿನ ಎಲ್ಲ ತರಹದ ಆಸ್ತಿಗಳ ಮೇಲೆ ಶೇ.3ರಿಂದ 5ರಷ್ಟು ತೆರಿಗೆ ಹೆಚ್ಚಳಕ್ಕೆ ಸರ್ಕಾರ ನಿರ್ದೇಶನ ನೀಡಿದೆ ಎಂಬ ವಿಷಯದ ಮೇಲಿನ ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಆದರ್ಶ್, ಈಗಾಗಲೇ ಎಲ್ಲ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತತ್ತರಿಸಿದ್ದಾರೆ. ಸರ್ಕಾರ ಪುರಸಭೆ ಆಸ್ತಿ ತೆರಿಗೆ ಹೆಚ್ಚಳ ಮಾಡುವುದಕ್ಕೆ ಮುಂದಾಗಿದೆ. ಆದ್ದರಿಂದ ಈ ವರ್ಷ ತೆರಿಗೆ ಹೆಚ್ಚಳ ಮಾಡುವುದು ಬೇಡ. ಇದಕ್ಕೆ ಸಭೆಯಲ್ಲಿ ವಿರೋಧವಿದೆ ಎಂದು ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸಿ ಎಂದರು.
ಮಧ್ಯಪ್ರವೇಶಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ, ಹಾಗೇ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ತೆರಿಗೆ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ನಿರ್ಣಯಿಸಿದರೆ ಮುಂದಿನ ಹಂತದಲ್ಲಿ ಸರ್ಕಾರದಿಂದ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುವುದಿಲ್ಲ ಎಂದರು. ತೆರಿಗೆ ಹಚ್ಚಳ ಮಾಡಲೇಬೇಕು ಎನ್ನುವುದಾದರೆ ಸಭೆಗೆ ಈ ವಿಚಾರ ಏಕೆ ತಂದಿದ್ದು ಎಂದು ಸದಸ್ಯ ಆದರ್ಶ್ ಆಕ್ಷೇಪವ್ಯಕ್ತಪಡಿಸಿದರು.
ಮಳಿಗೆಗಳ ಮರು ಹರಾಜು: ಮೂರು ಹಂತದಲ್ಲಿ ಪುರಸಭೆ ವಾಣಿಜ್ಯ ಮಳಿಗೆಗಳ ಮರು ಹರಾಜು ನಡೆಸಲಾಗುವುದು ಎಂದು ಪುರಸಭೆ ಅಧ್ಯಕ್ಷೆ ಜ್ಯೋತಿರಾಜ್‌ಕುಮಾರ್ ಹೇಳಿದರು.
ಜಿಲ್ಲಾಧಿಕಾರಿ ನಿರ್ದೇಶನದಂತೆ ಈಗಾಗಲೇ ಪುರಸಭೆಗೆ ಸೇರಿದ 169 ಮಳಿಗೆಗಳನ್ನು ಹರಾಜು ಮಾಡಲು ಸಿದ್ಧತೆ ನಡೆಸಲಾಗಿದ್ದು ಇದರಲ್ಲಿ ಶೇ.18ರಷ್ಟು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಮೀಸಲಿಡಲಾಗಿದೆ. ಮೊದಲ ಹಂತದಲ್ಲಿ ಬಸವೇಶ್ವರ ರಸ್ತೆಯ 34 ಹಾಗೂ ವಿಜಯ ಬ್ಯಾಂಕ್ ವಾಣಿಜ್ಯ ಸಂಕೀರ್ಣದ 20 ಮಳಿಗೆಗಳನ್ನು ಹರಾಜು ನಡೆಸಲು ಉದ್ದೇಶಿಸಲಾಗಿದೆ. ಮೀಸಲಾತಿಯಂತೆ ಬಸವೇಶ್ವರ ರಸ್ತೆಯ 9,17,27,28 ಹಾಗೂ 32 ಮತ್ತು ವಿಜಯಬ್ಯಾಂಕ್ ವಾಣಿಜ್ಯ ಸಂಕೀರ್ಣದ 4,8 ಹಾಗೂ 16 ನೇ ಮಳಿಗೆಗಳು ಮೀಸಲಿಗೆ ಒಳಪಟ್ಟಿವೆ ಎಂದರು.
ಅಧಿಕಾರಿಗಳ ತಪ್ಪಿನಿಂದ 15ನೇ ಹಣಕಾಸಿನ 1.15 ಕೋಟಿ ರೂ. ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಚರ್ಚೆ ನಡೆಸಿದರೂ ತಾರ್ಕಿಕ ಅಂತ್ಯ ಕಾಣದೆ ಮುಂದಿನ ವಿಷಯಕ್ಕೆ ಸಭೆ ಮುಂದುವರಿಯಿತು. ಮುಖ್ಯಮಂತ್ರಿ ಅನುದಾನದಲ್ಲಿ ನಡೆಯುತ್ತಿರುವ ಹಲವು ಕಾಮಗಾರಿಗಳನ್ನು ಗುತ್ತಿಗೆದಾರರು ಕೈಗೆತ್ತಿಕೊಳ್ಳದೆ ಕಾಲಹರಣ ಮಾಡುತ್ತಿದ್ದಾರೆ ಎಂಬ ವಿಚಾರ ಚರ್ಚೆಗೆ ಬಂದಿದ್ದು ಈ ಬಗ್ಗೆ ನಿಗಾ ವಹಿಸುವಂತೆ ಪುರಸಭೆಇಂಜಿನಿಯರ್‌ಗೆ ಸೂಚನೆ ನೀಡಲಾಯಿತು.
ಕಳೆದ ಎರಡು ವರ್ಷದ ಸಕಲೇಶ್ವರಸ್ವಾಮಿ ದನಗಳ ಜಾತ್ರೆ ವಸ್ತುಪ್ರದರ್ಶನದ ಖರ್ಚಿನಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ಪುರಸಭೆ ಲೆಕ್ಕಪರಿಶೋಧನೆ ನಡೆಸಿರುವ ಪರಿಶೋಧಕ ಲೆಕ್ಕ ಪಕ್ಕಾ ಇದೆ ಎಂದು ವರದಿ ನೀಡಿದ್ದಾರೆ. ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ವಿಚಾರವನ್ನು ಗಣನೆಗೆ ತಾರದೆ ಅಧಿಕಾರಿಗಳು ಲೆಕ್ಕಪತ್ರಗಳನ್ನು ಅನುಮೋದಿಸಿದ್ದಾರೆ. ಈ ಬಗ್ಗೆ ಸಮಗ್ರ ಚರ್ಚೆ ನಡೆಸಲು ಸಭೆ ಕರೆಯುವಂತೆ ಆದರ್ಶ್ ಆಗ್ರಹಿಸಿದರು. ಏಪ್ರಿಲ್ ಮೊದಲ ವಾರದಲ್ಲಿ ವಿಶೇಷ ಸಭೆ ಆಯೋಜಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಉಪಾಧ್ಯಕ್ಷೆ ಝರೀನಾ, ಸದಸ್ಯರಾದ ಮುಖೇಶ್ ಶೆಟ್ಟಿ, ಅಣ್ಣಪ್ಪ, ಸರಿತಾ, ವನಜಾಕ್ಷಿ, ವರಲಕ್ಷ್ಮೀ, ಪ್ರದೀಪ್, ಮೋಹನ್, ಇಂಜಿನಿಯರ್ ಸುಜಾತಾ ಇತರರು ಇದ್ದರು.